ಸುಂಕದಕಟ್ಟೆ ನವರಂಗ ಕಾಂಪೌಂಡ್ ಸಮೀಪದ ರಸ್ತೆ ಬದಿಯ ಚರಂಡಿಯಲ್ಲಿ ಕಳೆದ ಆರು ವರ್ಷಗಳಿಂದ ಮಣ್ಣು ತುಂಬಿಕೊಂಡಿರುವ ಪರಿಣಾಮ, ಮಳೆಗಾಲದ ವೇಳೆ ಮಳೆಯ ನೀರು ಸರಾಗವಾಗಿ ಹರಿಯದೆ ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಇದರಿಂದ ಸ್ಥಳೀಯ ನಾಗರಿಕರು ಪ್ರತಿವರ್ಷ ಎರಡು ಬಾರಿ ತಾತ್ಕಾಲಿಕವಾಗಿ ಮಣ್ಣು ಹಾಕುವ ಮೂಲಕ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಗಂಭೀರ ಸಮಸ್ಯೆ ಕುರಿತು ಊರಿನ ನಾಗರಿಕರು ಒಟ್ಟಾಗಿ ಪಿಡಬ್ಲ್ಯೂಡಿ ಇಂಜಿನಿಯರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದು, ಶಾಶ್ವತ ಪರಿಹಾರವಾಗಿ ಚರಂಡಿ ವ್ಯವಸ್ಥೆ ಹಾಗೂ ಪರ್ಯಾಯ ರಸ್ತೆ ನಿರ್ಮಾಣ ಅಗತ್ಯವಿದೆ ಎಂದು ಮನವಿ ಮಾಡಲಾಗಿದೆ. ಈ ಕುರಿತು ಪಂಚಾಯಿತಿ ವಾರ್ಡ್ ಸಭೆಯಲ್ಲಿಯೂ ಲಿಖಿತವಾಗಿ ದಾಖಲಿಸಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹಣ ಮಂಜೂರಾಗಿ ಈಗಾಗಲೇ ಏಳು ತಿಂಗಳು ಕಳೆದಿದ್ದರೂ, ಇನ್ನೂ ಕಾಮಗಾರಿ ಪ್ರಾರಂಭವಾಗದೇ ಇರುವುದರಿಂದ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಹಾಗೂ ಆತಂಕ ಹೆಚ್ಚಾಗಿದೆ.
ಇದಲ್ಲದೆ ಸೌಹಾರ್ದನಗರದ ಮುಖ್ಯ ರಸ್ತೆ ಕಾಂಕ್ರಿಟೀಕರಣಗೊಂಡ ಬಳಿಕ ರಸ್ತೆ ಬದಿಯಲ್ಲಿ ಮಣ್ಣು ತುಂಬಿಸಿದ್ದರಿಂದ, ವಲಬರುವ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಅಡಿಭಾಗಕ್ಕೆ ತಾಗುವ ಅಪಾಯ ಎದುರಾಗಿತ್ತು. ಈ ಸಮಸ್ಯೆಯನ್ನು ಪಿಡಬ್ಲ್ಯೂಡಿ ಇಂಜಿನಿಯರ್ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಪರಿಣಾಮ, ನಿನ್ನೆ ಕಾಂಕ್ರಿಟ್ ಮೂಲಕ ಮರುಜೋಡಣೆ ಕಾರ್ಯ ಕೈಗೊಳ್ಳಲಾಗಿದೆ.
ಅದೇ ರೀತಿಯಲ್ಲಿ ಸುಂಕದಕಟ್ಟೆ ನವರಂಗ ಕಾಂಪೌಂಡ್ ರಸ್ತೆಯ ಕಾಮಗಾರಿ ಇನ್ನೂ ಪ್ರಾರಂಭವಾಗದೇ ಇರುವುದರಿಂದ, ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಾಮಗಾರಿ ಆರಂಭಿಸಬೇಕೆಂದು ಎರಡನೇ ಬಾರಿ ಮನವಿ ಸಲ್ಲಿಸಲಾಗಿದೆ.
ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಸ್ಥಿಕೆ ವಹಿಸಿ, ಸುಂಕದಕಟ್ಟೆ – ನವರಂಗ ಕಾಂಪೌಂಡ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಆದಷ್ಟು ಬೇಗ ಪ್ರಾರಂಭಿಸಿ, ಮಳೆಗಾಲದ ಮುನ್ನ ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ನಾಗರಿಕರ ಪರವಾಗಿ ಕಳಕಳಿಯಿಂದ ಆಗ್ರಹಿಸುತ್ತೇನೆ ಎಂದು ಎಸ್ ಡಿ ಪಿ ಐ ಮುಖಂಡ ಅಬ್ದುಲ್ ಹಮೀದ್ ಕೊಳಂಬೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.




