ಮಂಗಳೂರು: ವೀಸಾ ಮೋಸ, ಚೆಕ್ ಬೌನ್ಸ್ ಹಾಗೂ ಸಂಘಟಿತ ಅಪರಾಧಗಳಿಗೆ ಸಂಬಂಧಿಸಿದಂತೆ ಮಂಗಳೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಬಾಕಿ ಇರುವ C.C/0000381/2018 ಪ್ರಕರಣದ ಪ್ರಮುಖ ಆರೋಪಿಯನ್ನು ತಕ್ಷಣ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ತುಳುನಾಡು ರಕ್ಷಣಾ ವೇದಿಕೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ಮನವಿ ಸಲ್ಲಿಸಿದೆ.
ತುಳುನಾಡು ರಕ್ಷಣಾ ವೇದಿಕೆಯ ಕೇಂದ್ರಿಯ ಮಂಡಳಿ ಉಪಾಧ್ಯಕ್ಷ ಜೆ. ಇಬ್ರಾಹಿಂ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಈ ಮನವಿಗೆ, ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ನಗರ ಕಾರ್ಯಾಧ್ಯಕ್ಷ ಕ್ಲಿಟಸ್ ಲೋಬೊ, ನಗರ ಉಪಾಧ್ಯಕ್ಷೆ ಶಾರದಾ ಶೆಟ್ಟಿ, ಮುನೀರ್ ಮುಕ್ಕಚೇರಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸದಸ್ಯರು ನಿಯೋಗವಾಗಿ ಭಾಗವಹಿಸಿದರು.

ಈ ಸಂದರ್ಭ ಮಾತನಾಡಿದ ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ,
“ಪ್ರಕರಣದ ಪ್ರಮುಖ ಆರೋಪಿ ಶ್ರೀ ಕ್ಲಿಫರ್ಡ್ ಜೋಸೆಫ್ ಪೈಸ ಕಳೆದ ಎಂಟು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಪರಾರಿಯಾಗಿರುವುದು ನ್ಯಾಯಾಂಗ ವ್ಯವಸ್ಥೆಗೆ ಗಂಭೀರ ಸವಾಲಾಗಿದೆ. ಇದು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಸಾರ್ವಜನಿಕ ಹಿತಾಸಕ್ತಿಗೂ ದೊಡ್ಡ ಧಕ್ಕೆಯಾಗಿದೆ” ಎಂದು ಹೇಳಿದರು.
ಆರೋಪಿ ವಿರುದ್ಧ ವೀಸಾ ಮೋಸ ಹಾಗೂ ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿದ್ದು, ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ನಾಗರಿಕರನ್ನು ವಂಚಿಸಿರುವ ಆರೋಪಗಳು ಕೇಳಿಬಂದಿವೆ. ಈ ಚಟುವಟಿಕೆಗಳು ಸಂಘಟಿತ ಅಪರಾಧದ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಗೆ ಭಾರೀ ಅಪಾಯ ಉಂಟುಮಾಡಿವೆ ಎಂದು ವೇದಿಕೆ ತಿಳಿಸಿದೆ.
ಪ್ರಕರಣದಲ್ಲಿ ಆರೋಪಿಯ ವಿರುದ್ಧ ಅನೇಕ ಬಾರಿ ನಾನ್–ಬೆಲಬಲ್ ವಾರಂಟ್ಗಳು (NBW) ಜಾರಿಯಾಗಿದ್ದರೂ, ಇಂದಿಗೂ ಬಂಧನವಾಗದಿರುವುದು ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ವಾರಂಟ್ ಜಾರಿಗೆ ಆಗುತ್ತಿರುವ ವಿಳಂಬ ನ್ಯಾಯ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವಂತಾಗಿದೆ ಎಂದು ವೇದಿಕೆ ಕಳವಳ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ತುಳುನಾಡು ರಕ್ಷಣಾ ವೇದಿಕೆ ಪೊಲೀಸ್ ಆಯುಕ್ತರಿಗೆ ಕೆಳಕಂಡಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ:
• ಪರಾರಿಯಾಗಿರುವ ಆರೋಪಿ ಶ್ರೀ ಕ್ಲಿಫರ್ಡ್ ಜೋಸೆಫ್ ಪೈಸನನ್ನು ಪತ್ತೆಹಚ್ಚಿ ತಕ್ಷಣ ಬಂಧಿಸುವುದು
• ಜಾರಿಯಾಗಿರುವ ಎಲ್ಲಾ ನಾನ್–ಬೆಲಬಲ್ ವಾರಂಟ್ಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದು
• ಆರೋಪಿಯ ವಿರುದ್ಧ ಇರುವ ಇತರ ಮೋಸ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವುದು
• ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಅಗತ್ಯ ಆಡಳಿತಾತ್ಮಕ ಕ್ರಮ ಕೈಗೊಳ್ಳುವುದು
“ಇದು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಪ್ರಕರಣವಲ್ಲ; ಇದು ಸಮಾಜದ ನಂಬಿಕೆ ಮತ್ತು ಕಾನೂನಿನ ಆಳ್ವಿಕೆಗೆ ಸಂಬಂಧಿಸಿದ ವಿಷಯ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ” ಎಂದು ಪ್ರಶಾಂತ್ ಭಟ್ ಕಡಬ ಎಚ್ಚರಿಸಿದರು.
ನ್ಯಾಯ ದೊರಕುವಂತೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ವಂಚನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ತುಳುನಾಡು ರಕ್ಷಣಾ ವೇದಿಕೆ ವ್ಯಕ್ತಪಡಿಸಿದೆ.







