ಬ್ರಹ್ಮಾವರ:
ನಿನ್ನೆ ಸಾಯಂಕಾಲ ಸಾಹೇಬ್ರಕಟ್ಟೆಯಿಂದ ಬ್ರಹ್ಮಾವರದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಬಾರ್ಕೂರು ಬ್ರಿಡ್ಜ್ ಸಮೀಪ ಸಂಜೆ ಸುಮಾರು 4 ಗಂಟೆಯ ವೇಳೆಗೆ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಒಂದು ಬ್ಯಾಗ್ನ್ನು ರೋಶನ್ ಡಿಸೋಜ ಅಮ್ಮುಂಜೆ ಗಮನಿಸಿದರು.
ತಕ್ಷಣವೇ ಬ್ಯಾಗ್ನ್ನು ತೆರೆದು ಪರಿಶೀಲಿಸಿದಾಗ, ಅದರೊಳಗೆ ಬಟ್ಟೆಗಳು ಹಾಗೂ ಬೆಲೆಬಾಳುವ ಚಿನ್ನಾಭರಣಗಳು ಇರುವುದನ್ನು ಕಂಡುಬಂದಿತು. ಯಾವುದೇ ಸಂಶಯಕ್ಕೆ ಆಸ್ಪದ ಕೊಡದೆ, ಅದೇ ಕ್ಷಣದಲ್ಲಿ ಈ ವಿಷಯವನ್ನು ತಮ್ಮ ವಾಟ್ಸಪ್ ಸ್ಟೇಟಸ್ ಹಾಗೂ ವಿವಿಧ ಗ್ರೂಪ್ಗಳ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡರು.
ದೇವರ ಕೃಪೆಯಿಂದ ಹಾಗೂ ಸಾಮಾಜಿಕ ಜಾಲತಾಣದ ಸಹಕಾರದಿಂದ, ಬ್ಯಾಗ್ನ ನೈಜ ವಾರಸುದಾರರು ದಾವಣಗೆರೆಯವರು ಎಂಬುದು ಪತ್ತೆಯಾಗಿದ್ದು, ವಸ್ತುಗಳನ್ನು ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತುಳುನಾಡ ರಕ್ಷಣಾ ವೇದಿಕೆ ಮುಖಂಡ ರೋಶನ್ ಡಿಸೋಜ ಅಮ್ಮುಂಜೆ
“ಇದನ್ನು ಸಾಧನೆ ಎಂದು ತೋರಿಸಿಕೊಳ್ಳಲು ನಾನು ಹಂಚಿಕೊಂಡಿಲ್ಲ. ಬೇರೆಯವರ ವಸ್ತು ನಮಗೆ ಬೇಡ ಎಂಬ ಮನಸ್ಥಿತಿಯಿಂದಲೇ ಈ ನಡೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ವಸ್ತು ಕಳೆದುಕೊಂಡಾಗ ಆಗುವ ನೋವು ಎಷ್ಟು ದೊಡ್ಡದು ಅನ್ನೋದು ಅದನ್ನು ಅನುಭವಿಸಿದವರಿಗೇ ಗೊತ್ತು. ಆ ನೋವಿನ ಶಾಪ ನಮಗೆ ಬೇಡ ಅನ್ನೋ ಭಾವನೆಯೇ ನನ್ನ ಕಾರ್ಯಕ್ಕೆ ಕಾರಣ,” ಎಂದರು.
ಇದಕ್ಕೂ ಮುನ್ನವೂ ಪ್ರಯಾಣದ ವೇಳೆ ಸಿಕ್ಕಿದ್ದ ವಸ್ತುಗಳನ್ನು ಇದೇ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅದರ ಯಥಾರ್ಥ ಮಾಲೀಕರಿಗೆ ತಲುಪಿಸಿರುವ ಉದಾಹರಣೆಗಳು ಇರುವುದಾಗಿ ಅವರು ತಿಳಿಸಿದರು.
“ಕಷ್ಟಪಟ್ಟು ದುಡಿದು ಸಂಪಾದಿಸಿದ ವಸ್ತು ಜೀವನಪೂರ್ತಿ ನಮ್ಮ ಜೊತೆಯಲ್ಲಿರುತ್ತದೆ. ಆದರೆ ಅರ್ಧದಲ್ಲಿ ಸಿಕ್ಕ ವಸ್ತು ಅರ್ಧದಲ್ಲೇ ಹೋಗುತ್ತದೆ — ಇದು ಜೀವನದ ಸತ್ಯ,” ಎಂದು ಅವರು ಅಭಿಪ್ರಾಯಪಟ್ಟರು.
ಮಾನವೀಯತೆ, ಪ್ರಾಮಾಣಿಕತೆ ಹಾಗೂ ಇತರರ ನೋವಿಗೆ ಸ್ಪಂದಿಸುವ ಮನಸ್ಸು ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಸಂದರ್ಭದಲ್ಲಿ, ರೋಶನ್ ಡಿಸೋಜ ಅಮ್ಮುಂಜೆ ಅವರ ಈ ನಡೆ ಸಮಾಜಕ್ಕೆ ಮಾದರಿಯಾಗಿದೆ. ನಮಗೆ ಸಿಕ್ಕದ್ದನ್ನು ನಮ್ಮದು ಮಾಡಿಕೊಳ್ಳುವುದಕ್ಕಿಂತ, ಅದರ ಯಥಾರ್ಥ ಮಾಲೀಕರಿಗೆ ತಲುಪಿಸುವ ಸಂತೋಷವೇ ದೊಡ್ಡದು ಎಂಬ ಸಂದೇಶವನ್ನು ಈ ಘಟನೆಯು ನೀಡುತ್ತದೆ.





