ಮಂಗಳೂರು :
ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿರುವ ಮಂಗಳೂರು ದಸರಾ ಹಬ್ಬದ ವೈಭವವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ, 2026–27ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಮಂಗಳೂರು ದಸರಾ ಆಚರಣೆಗೆ ರೂ.5 ಕೋಟಿ ವಿಶೇಷ ಅನುದಾನ ಘೋಷಿಸಬೇಕೆಂದು ಮಂಗಳೂರು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವದ ಮನವಿ ಸಲ್ಲಿಸಿದರು.
ಮೈಸೂರು ದಸರಾ ಬಳಿಕ ರಾಜ್ಯದಲ್ಲೇ ಅತೀ ಹೆಚ್ಚು ಜನಸಂಚಾರವಾಗುವ ಹಬ್ಬಗಳ ಪೈಕಿ ಮಂಗಳೂರು ದಸರಾ ಪ್ರಮುಖ ಸ್ಥಾನ ಹೊಂದಿದೆ. ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರಸಿದ್ಧ ದೇವಾಲಯಗಳು ಮತ್ತು ತೀರ್ಥಕ್ಷೇತ್ರಗಳು ದೇಶ-ವಿದೇಶಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಂದ ಕಿಕ್ಕಿರಿದುಕೊಳ್ಳುತ್ತವೆ. ಈ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಜಿಲ್ಲೆಯ ಸಾಂಸ್ಕೃತಿಕ ಗುರುತು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಸಹ ಮಹತ್ವದ ಕೊಡುಗೆ ನೀಡುತ್ತಿದೆ.
ರಾಜ್ಯ ಸರ್ಕಾರವು ಬಜೆಟ್ನಲ್ಲಿ ರೂ.5 ಕೋಟಿ ಅನುದಾನ ಘೋಷಿಸಿದಲ್ಲಿ, ಮಂಗಳೂರು ದಸರಾವನ್ನು ಇನ್ನಷ್ಟು ವಿಜೃಂಭಣೆಯಿಂದ, ಸಂಪ್ರದಾಯಬದ್ಧವಾಗಿ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡು ಆಯೋಜಿಸಲು ಸಾಧ್ಯವಾಗಲಿದೆ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುವ ಜೊತೆಗೆ, ಸ್ಥಳೀಯ ಕಲಾವಿದರು, ವ್ಯಾಪಾರಿಗಳು ಹಾಗೂ ಉದ್ಯೋಗಾವಕಾಶಗಳಿಗೂ ಸಹಕಾರಿಯಾಗಲಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಹಬ್ಬಕ್ಕೆ ವಿಶೇಷ ಅನುದಾನ ಘೋಷಿಸುವಂತೆ ಹಾಗೂ ವಿಷಯವನ್ನು ಆದ್ಯತೆಯ ಮೇರೆಗೆ ಪರಿಗಣಿಸುವಂತೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಂತಿಸಿದರು.

