ಬಜಗೋಳಿಯ ಧರ್ಮಶಾಲೆ ತೀರ್ಥದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಪೂಜಾ ಕಾರ್ಯಕ್ರಮವು ಸೋಮವಾರ (26.01.2026) ಭಕ್ತಿಭಾವ, ಶ್ರದ್ಧಾ ಸಂಭ್ರಮದೊಂದಿಗೆ ನೆರವೇರಿತು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಯಶಸ್ವಿಯಾಗಿ ನಡೆದವು.
ಕಾರ್ಯಕ್ರಮದ ಆರಂಭದಲ್ಲಿ ತೋರಣ ಮುಹೂರ್ತ, ವಿಮಾನ ಶುದ್ಧಿ, ಕ್ಷೇತ್ರಪಾಲ ಪೂಜೆ, ನಾಗದೇವರ ಪೂಜೆ, ಕುಷ್ಮಾಂಡಿನೀ ದೇವಿ ಶೋಡಷೋಪಚಾರ, ಭೈರವಿ ಪದ್ಮಾವತಿ ದೇವಿ ಶೋಡಷೋಪಚಾರಗಳು ನೆರವೇರಿದವು. ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಲಕ್ಷ ಹೂವಿನ ಪೂಜೆ ನಡೆಯಿತು. ಬಳಿಕ ದೇವರ ಉತ್ಸವ ಜರುಗಿತು.

ಅನಂತರ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ವಿಜೃಂಭಣೆಯಿಂದ ನೆರವೇರಿತು. ಪ್ರಥಮ ಕಲಶಕ್ಕೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಚಾಲನೆ ನೀಡಿದರು. ಭುಜಬಲಿ ಧರ್ಮಸ್ಥಳದ ಸಂಜಯಂತ ಕುಮಾರ್ ಶೆಟ್ಟಿ ಜಲಾಭಿಷೇಕ ನೆರವೇರಿಸಿದರು. ಎಳನೀರು ಅಭಿಷೇಕವನ್ನು ಚಕ್ರೇಶ್ವರಿ ಜೈನ ಮಹಿಳಾ ಸಮಾಜ, ಬೆಂಗಳೂರು ಕೈಗೊಂಡಿತು. ಇಕ್ಷುರಸ ಅಭಿಷೇಕವನ್ನು ಪ್ರಶಾಂತ್ ಹೆಗ್ಡೆ ನಿಟ್ಟೆ ಹಾಗೂ ದಮ್ಮಣ್ಣ ಡಾ. ಸುದೀಪ್ ಸಿದ್ದಕಟ್ಟೆ ನೆರವೇರಿಸಿದರು.

ಧಾನ್ಯ, ಕ್ಷೀರ, ಚತುಶ್ಕೋನ, ಕಲ್ಕ ಚೂರ್ಣ, ಅರಶಿಣ ಹುಡಿ, ಅರಶಿಣ ಅಭಿಷೇಕ, ಕಾಶ್ಮೀರ ಕೇಸರಿ, ಸರ್ವ ಔಷಧಿ, ಕಷಾಯ, ಬಿಳಿ ಚಂದನ, ಶ್ರೀಗಂಧ, ರಕ್ತಚಂದನ, ಅಷ್ಟಗಂಧ, ಸುಗಂಧ ಕಲಶ ಸೇರಿದಂತೆ ವಿವಿಧ ಅಭಿಷೇಕಗಳನ್ನು ಭಕ್ತರು ಹಾಗೂ ಗಣ್ಯರು ಸಮರ್ಪಿಸಿದರು. ಕನಕವೃಷ್ಟಿ, ಪುಷ್ಪವೃಷ್ಟಿ, ಪುಷ್ಪಮಾಲೆ, ಸನಿಹ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು.
ಮಹಾಶಾಂತಿ ಧಾರ ನೆರವೇರಿಸಿದ ಬಳಿಕ ಮಹಾಮಂಗಳ ಆರತಿಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
ಈ ಸಂದರ್ಭದಲ್ಲಿ ಮಂಗಳೂರು ಜೈನ್ ಮಿಲನ್ ಅಧ್ಯಕ್ಷರಾದ ರತ್ನಕರ ಜೈನ್, ಪುಷ್ಪರಾಜ್ ಜೈನ್, ಶ್ರೀ ಎಂ.ಎನ್. ರಾಜೇಂದ್ರ ಕುಮಾರ್, ಸುಮ್ಮ ಪ್ರಮೋದ್ ಹೆಗ್ಡೆ, ಟ್ರಸ್ಟಿ ವೀರಂ ಜಯ, ಧನಕೀರ್ತಿ ಬಲಿಪ, ರಾಜೇಂದ್ರ ಬಲ್ಲಾಳ್, ರವಿ ವರ್ಮಾ ಜೈನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾನೆ ಹಾಗೂ ಆಮಂತ್ರಣ ಬಳಗದ ವಿಜಯಕುಮಾರ್ ಅರ್ವ ಅವರನ್ನು ಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವದಿಸಿದರು.
ಒಟ್ಟಾರೆ ಧಾರ್ಮಿಕ ಶ್ರದ್ಧೆ, ಭಕ್ತಿಭಾವ ಮತ್ತು ಸಂಪ್ರದಾಯಗಳ ಸಂಗಮವಾಗಿ ಧರ್ಮಶಾಲೆ ತೀರ್ಥದ ಮೂರನೇ ವಾರ್ಷಿಕೋತ್ಸವ ಸ್ಮರಣೀಯವಾಗಿ ನೆರವೇರಿತು.

