ಪಡುಬಿದ್ರೆ : ಬಿಗ್ಬಾಸ್ ಕನ್ನಡ ಸೀಸನ್–12ರಲ್ಲಿ ರನ್ನರ್ಅಪ್ ಪ್ರಶಸ್ತಿ ಗೆದ್ದು ಮನೆಮಂದಿಯ ಹೃದಯ ಗೆದ್ದ ರಕ್ಷಿತಾ ಶೆಟ್ಟಿ ಹುಟ್ಟೂರಿಗೆ ಆಗಮಿಸಿದ ಕ್ಷಣವೇ ಸಂಭ್ರಮದ ಮಹಾಪೂರ ಹರಿದುಬಂದಿತು. ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್ಗೇಟ್ ಬಳಿ ರಕ್ಷಿತಾಳಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ ಗೌರವಿಸಿದರು.
ಹೆಜಮಾಡಿ ಟೋಲ್ನಿಂದ ಪಡುಬಿದ್ರೆಯವರೆಗೆ ಭರ್ಜರಿ ಮೆರವಣಿಗೆಯೊಂದಿಗೆ ರಕ್ಷಿತಾ ಶೆಟ್ಟಿಯನ್ನು ಕರೆತರಲಾಯಿತು. ತೆರೆದ ವಾಹನದಲ್ಲಿ ನಿಂತು ಅಭಿಮಾನಿಗಳಿಗೆ ಕೈಬೀಸಿದ ರಕ್ಷಿತಾ, ಮೆರವಣಿಗೆಯ ಮಧ್ಯೆ ಕೈಯಲ್ಲಿ ಬಂಗುಡೆ ಮೀನು ಹಿಡಿದು ಸಂಭ್ರಮ ವ್ಯಕ್ತಪಡಿಸಿದ ದೃಶ್ಯ ಎಲ್ಲರ ಗಮನ ಸೆಳೆಯಿತು.
ರಕ್ಷಿತಾ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಹೆಜಮಾಡಿ ಟೋಲ್ನಲ್ಲಿ ಜಮಾಯಿಸಿದ್ದು, ಹೂಗುಚ್ಛ, ಹಾರಗಳೊಂದಿಗೆ ಅಭಿನಂದನೆ ಸಲ್ಲಿಸಿದರು. ಸೆಲ್ಫಿ ಪಡೆಯಲು ಅಭಿಮಾನಿಗಳ ಮುಗಿಬಿದ್ದ ದೃಶ್ಯ ಕಂಡುಬಂದಿತು. ಬಳಿಕ ರಕ್ಷಿತಾ ಅವರ ವಾಹನದ ಜೊತೆಗೆ ಅಭಿಮಾನಿಗಳು ಹೆಜ್ಜೆ ಹಾಕಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದರು.
ಬಿಗ್ಬಾಸ್ ರನ್ನರ್ಅಪ್ ಗೌರವದೊಂದಿಗೆ ಹುಟ್ಟೂರಿಗೆ ಮರಳಿದ ರಕ್ಷಿತಾ ಶೆಟ್ಟಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದು, ಪಡುಬಿದ್ರೆ ಸಂಭ್ರಮದ ಸಾಕ್ಷಿಯಾಗಿತು.
