ಚಿಕ್ಕಮಂಗಳೂರು: ಮಕ್ಕಳ ಭವಿಷ್ಯಕ್ಕಾಗಿ ಎಲ್ಲ ಕಷ್ಟವನ್ನೂ ಸಹಿಸುವುದೇ ಪೋಷಕರ ಧರ್ಮ. ಆದರೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ನಡೆದಿರುವ ಘಟನೆ, ತಂದೆ ಎಂಬ ಸಂಬಂಧದ ಅರ್ಥವನ್ನೇ ಮರೆಸುವಂತಿದೆ. ಹಣದ ಲಾಲಸೆಗೆ ಮನುಷ್ಯತ್ವವನ್ನೇ ಮಾರಾಟ ಮಾಡಿದ ತಂದೆ, ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದಾನೆಂಬ ಆರೋಪ ಸಮಾಜವನ್ನೇ ಬೆಚ್ಚಿಬೀಳಿಸಿದೆ.
ದಿನಕ್ಕೆ ಐದು ಸಾವಿರ ರೂ. ಲಾಭ ಸಿಗುತ್ತದೆಯೆಂಬ ಆಸೆಗೆ, ಹೆತ್ತ ಮಗಳ ಭವಿಷ್ಯವನ್ನೇ ಕತ್ತಲೆಗೆ ತಳ್ಳಿದ ಈ ಅಮಾನವೀಯ ಕೃತ್ಯ ಇಡೀ ಜಿಲ್ಲೆಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ತಾಯಿಯಿಲ್ಲದ ಬದುಕು – ತಂದೆಯೇ ದ್ರೋಹಿ
ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿ, ಹಲವು ವರ್ಷಗಳಿಂದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು ಪಿಯುಸಿ ತನಕ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಳು. ಬಳಿಕ ತಂದೆಯ ಬಳಿ ವಾಸಕ್ಕೆ ಬಂದ ಆಕೆ, ಕಳೆದ ಡಿಸೆಂಬರ್ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ತೆರಳಿ ಎರಡು ದಿನಗಳ ಕಾಲ ಉಳಿದು ಮರಳಿದ್ದಳು.
ಮತ್ತೊಮ್ಮೆ ಅಜ್ಜಿ ಕರೆಯುತ್ತಿದ್ದಾಳೆಂದು ನಂಬಿ ಹೊರಟ ಬಾಲಕಿಗೆ, ಅಲ್ಲೇ ತನ್ನ ಬದುಕಿನ ಅತ್ಯಂತ ಭೀಕರ ಅನುಭವ ಎದುರಾಯಿತು.
ಪರಿಚಯದಿಂದ ದಂಧೆಯವರೆಗೆ
ಅಜ್ಜಿಯ ಮನೆಗೆ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಭರತ್ ಶೆಟ್ಟಿ ಎಂಬಾತ, ತಂದೆ-ಮಗಳೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಬಳಿಕ ತನ್ನ ಮನೆಯಲ್ಲಿ ತಂಗುವಂತೆ ಸೂಚಿಸಿದ ಆತನ ಮಾತಿಗೆ ಒಪ್ಪಿದ ತಂದೆ, ಮಗಳೊಂದಿಗೆ ಭರತ್ ಶೆಟ್ಟಿಯ ಜೊತೆಗೆ ಮಂಗಳೂರಿಗೆ ತೆರಳಿದ್ದಾನೆ.
ಪ್ರಯಾಣದ ವೇಳೆ ಬಾಲಕಿ ತಾನು ಮುಟ್ಟಾಗಿರುವುದನ್ನು ತಂದೆಗೆ ತಿಳಿಸಿದ್ದರೂ, ಆ ತಂದೆ ಕರುಣೆಯನ್ನೂ ತೋರದೆ ಮೌನ ವಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅಮಾನುಷ ದೌರ್ಜನ್ಯ
ಮರುದಿನ ಭರತ್ ಶೆಟ್ಟಿ ಬಾಲಕಿಯ ಬಳಿ ಬಂದು, ನಾಲ್ಕೈದು ಮಂದಿ ಬರುವರು, ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಬೇಕೆಂದು ಒತ್ತಾಯಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾಳೆ.
20 ರಿಂದ 45 ವರ್ಷದ ವಯಸ್ಸಿನ ನಾಲ್ವರು ವ್ಯಕ್ತಿಗಳು ಒಬ್ಬರ ನಂತರ ಒಬ್ಬರಂತೆ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಮುಂದಿನ ದಿನವೂ ಇದೇ ಕೃತ್ಯಕ್ಕೆ ಒತ್ತಾಯಿಸಿದಾಗ ಬಾಲಕಿ ವಿರೋಧ ವ್ಯಕ್ತಪಡಿಸಿದರೂ, ಮತ್ತೊಮ್ಮೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
“ನಾನು ಅಪ್ರಾಪ್ತೆ, ನನ್ನನ್ನು ಬಿಡಿ” ಎಂದು ಎಷ್ಟೇ ಬೇಡಿಕೊಂಡರೂ, “ಭರತ್ ಶೆಟ್ಟಿಗೆ ಹಣ ಕೊಟ್ಟಿದ್ದೇವೆ” ಎಂದು ಹೇಳಿ ಆರೋಪಿಗಳು ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ.
12 ಮಂದಿ ಆರೋಪಿಗಳ ಬಂಧನ
ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಲಕಿಯ ತಂದೆ, ಅಜ್ಜಿ ಹಾಗೂ ವೇಶ್ಯಾವಾಟಿಕೆ ದಂಧೆಯ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಭರತ್ ಶೆಟ್ಟಿ ಸೇರಿ ಒಟ್ಟು 12 ಮಂದಿಯನ್ನು ಬಂಧಿಸಿದ್ದಾರೆ.
ಭರತ್ ಶೆಟ್ಟಿಯ ಅಪರಾಧ ಜಾಲ
ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ ಈಗಾಗಲೇ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇನ್ನಷ್ಟು ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ತಂದೆ ಎಂಬ ಸಂಬಂಧವೇ ಅಪಾಯವಾಗುವ ಮಟ್ಟಕ್ಕೆ ಇಳಿದಿರುವ ಈ ಘಟನೆ, ಅಪ್ರಾಪ್ತ ಮಕ್ಕಳ ಸುರಕ್ಷತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.



“

