ಮಂಗಳೂರು | ವರದಿ :
ದಕ್ಷಿಣ ಕನ್ನಡ ಜಿಲ್ಲಾಡಳಿತದ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನ ಶರಧಿ ಪ್ರತಿಷ್ಠಾನ ಆಯೋಜಿಸಿರುವ, ಅಸ್ತ್ರ ಗೋಲ್ಡ್ & ಡೈಮಂಡ್ಸ್ ಸಹಯೋಗದೊಂದಿಗೆ ನಡೆಯುವ “ಕಲಾ ಪರ್ಬ” ಚಿತ್ರ–ಶಿಲ್ಪ–ಸಾಂಸ್ಕೃತಿಕ ಮೇಳವು ಜ.9ರಿಂದ 11ರವರೆಗೆ ಕದ್ರಿ ಪಾರ್ಕ್ನಲ್ಲಿ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ. ಶಿವಪ್ರಕಾಶ್ ತಿಳಿಸಿದ್ದಾರೆ.
ಕದ್ರಿ ಪಾರ್ಕ್ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರ ಸುಮಾರು 120 ಮಳಿಗೆಗಳಲ್ಲಿ 5,000ಕ್ಕೂ ಹೆಚ್ಚು ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು. ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಸೇರಿದಂತೆ ಕಲಾವಿದರಿಗೆ ಉತ್ತೇಜನ ನೀಡುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ರಾಜ್ಯಗಳಿಂದ 120ಕ್ಕೂ ಅಧಿಕ ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಉತ್ಸವದ ಕಾರ್ಯಕ್ರಮಗಳು:
ಜ.9ರಂದು ಸಂಜೆ 5.30ಕ್ಕೆ ಕಲಾ ಪರ್ಬ ಉದ್ಘಾಟನೆ, ಮಳಿಗೆಗಳ ಉದ್ಘಾಟನೆ ಹಾಗೂ ಶಿಲ್ಪಕಲಾ ಮಳಿಗೆಗಳ ಉದ್ಘಾಟನೆ ನಡೆಯಲಿದ್ದು, ಭರತನಾಟ್ಯ ಕಾರ್ಯಕ್ರಮವೂ ಇರಲಿದೆ. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜ.10 ಹಾಗೂ 11ರಂದು ಬೆಳಗ್ಗೆ 9ರಿಂದ ರಾತ್ರಿ 9.30ರವರೆಗೆ ಕಲಾ ಪರ್ಬ ನಡೆಯಲಿದೆ. ಜ.10ರಂದು ಬೆಳಗ್ಗೆ 11ರಿಂದ ಚಿತ್ರಕಲಾ ಸಂವಾದ, ರಂಗೋಲಿ ಸ್ಪರ್ಧೆ, ಮಕ್ಕಳ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಮೇಳ, ಕೊಳಲು ವಾದನ, ಸಾಧಕ ಕಲಾವಿದರಿಗೆ ಸನ್ಮಾನ, ವಿಶೇಷ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ಹಾಗೂ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾದ 100ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.
ಜ.11ರಂದು ಬೆಳಗ್ಗೆ 11ರಿಂದ ಶಿಲ್ಪಕಲಾ ಪ್ರಾತ್ಯಕ್ಷಿಕೆ, ಮೆಹಂದಿ ಬಿಡಿಸುವ ಸ್ಪರ್ಧೆ, ಬೀದಿ ನಾಟಕ, ಕಲಾ ಕಾರ್ಯಾಗಾರ, ಯಕ್ಷಗಾನ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 3ಕ್ಕೆ ಬಿ.ಎಸ್. ದೇಸಾಯಿ ಅವರ ಶಿಷ್ಯವೃಂದದಿಂದ 5 ಅಡಿ ಎತ್ತರ, 20 ಅಡಿ ಉದ್ದದ ಪರಿಸರ ಜಾಗೃತಿಯ ಜಲವರ್ಣ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ್ ಸೋಮಯಾಜಿ, ಅಧ್ಯಕ್ಷ ಕೋಟಿಪ್ರಸಾದ್ ಆಳ್ವ, ಉಪಾಧ್ಯಕ್ಷ ಶರತ್ ಹೊಳ್ಳ, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ರಾಜ್ ಬೈಕಾಡಿ, ಜಿನೇಶ್ ಪ್ರಸಾದ್ ಉಪಸ್ಥಿತರಿದ್ದರು.
