ಕಾರ್ಕಳ:
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ವರ್ಗಾವಣೆ ಆದೇಶ ಹೊರಡಿಸಿದ್ದು, ಮಂಗಳೂರಿನ ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳ್ಳಿಯಪ್ಪ ಕೆ. ಯು. ಅವರನ್ನು ಕಾರ್ಕಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿಯಾಗಿ ನೇಮಕ ಮಾಡಲಾಗಿದೆ.
ಈ ನೇಮಕಾತಿಗೆ ಕಾರಣವಾಗಿ ಕಾರ್ಕಳದ ಎಎಸ್ಪಿಯಾಗಿದ್ದ ಡಾ. ಹರ್ಷಪ್ರಿಯಂವದ (ಐಪಿಎಸ್) ಅವರಿಗೆ ಬೆಂಗಳೂರು ಸಿಐಡಿ ವಿಭಾಗದ ಎಸ್ಪಿಯಾಗಿ ಬಡ್ತಿ ನೀಡಿ ವರ್ಗಾಯಿಸಲಾಗಿರುವುದು ಉಲ್ಲೇಖಿಸಲಾಗಿದೆ. ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಬೆಳ್ಳಿಯಪ್ಪ ಕೆ. ಯು. ಅವರನ್ನು ನಿಯೋಜಿಸಲಾಗಿದೆ.
ಬೆಳ್ಳಿಯಪ್ಪ ಕೆ. ಯು. ಅವರು ಅನುಭವಸಂಪನ್ನ ಹಾಗೂ ಕರ್ತವ್ಯನಿಷ್ಠ ಪೊಲೀಸ್ ಅಧಿಕಾರಿ ಎಂಬ ಹೆಸರು ಪಡೆದಿದ್ದು, ಈ ಹಿಂದೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಕುಂದಾಪುರ ಪೊಲೀಸ್ ಉಪ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗೆ ಇದೆ.
ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ಬೆಳ್ಳಿಯಪ್ಪ ಅವರ ಅನುಭವ ಕಾರ್ಕಳ ಪೊಲೀಸ್ ಉಪ ವಿಭಾಗಕ್ಕೆ ಹೆಚ್ಚಿನ ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.




