ಉಡುಪಿ | ಶಿರ್ವ
ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಶಿರ್ವ ಪೊಲೀಸರು ಭೇದಿಸಿ, ಅಂತರ್ರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಸ್ಕೂಟರ್ ಕಳವು ಪ್ರಕರಣದ ವಿವರ
ಶಿರ್ವ ಪಿರ್ಯಾದಿದಾರರಾದ ಶ್ರೀಮತಿ ಗುಣವತಿ ಅವರ ಪುತ್ರ ಕೌಶಿಕ್ ಅವರು ದಿನಾಂಕ 05-12-2025ರಂದು ಪಿರ್ಯಾದಿದಾರರ ಮಾಲೀಕತ್ವದ KA-20 HD-8622 ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಬಂಟಕಲು ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿಗೆ ತೆಗೆದುಕೊಂಡು ಹೋಗಿದ್ದರು. ಮಧ್ಯಾಹ್ನ 12:45ರ ಸುಮಾರಿಗೆ ಊಟದ ವಿರಾಮದ ವೇಳೆ ಬಂಟಕಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿ ಸ್ಕೂಟರ್ ಪಾರ್ಕಿಂಗ್ ಮಾಡಿ ಊಟಕ್ಕೆ ತೆರಳಿದ್ದು, ಮಧ್ಯಾಹ್ನ 1:15ಕ್ಕೆ ಮರಳಿ ಬಂದಾಗ ಸ್ಕೂಟರ್ ಕಳವು ಆಗಿರುವುದು ಗೊತ್ತಾಗಿದೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪಿರ್ಯಾದಿ ದಾಖಲಾಗಿದ್ದು, ಕಳವಾದ ಸ್ಕೂಟರಿನ ಅಂದಾಜು ಮೌಲ್ಯ ರೂ.60,000 ಆಗಿದೆ.

ವಿಶೇಷ ತಂಡದ ಕಾರ್ಯಾಚರಣೆ
ಪ್ರಕರಣದ ಗಂಭೀರತೆಯನ್ನು ಮನಗಂಡ ಶಿರ್ವ ಪೊಲೀಸರು ವಿಶೇಷ ತಂಡವನ್ನು ರಚಿಸಿ ಉಡುಪಿ, ಮಲ್ಪೆ, ಕಾರ್ಕಳ ಹಾಗೂ ಧರ್ಮಸ್ಥಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚರಣೆ ನಡೆಸಿದರು. ಈ ವೇಳೆ ಓಂ ಕೋಲಾರ ಎಂಬ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಶಿರ್ವ ಪೊಲೀಸ್ ಠಾಣೆಗೆ ಸಂಬಂಧಿಸಿದ ಒಂದು ದ್ವಿಚಕ್ರ ವಾಹನ ಸೇರಿದಂತೆ ಕಾಪು ಹಾಗೂ ಬೆಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಸಂಬಂಧಿಸಿದಂತೆ ಒಟ್ಟು ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉನ್ನತಾಧಿಕಾರಿಗಳ ಮಾರ್ಗದರ್ಶನ
ಈ ಯಶಸ್ವಿ ಕಾರ್ಯಾಚರಣೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜಮತ್ ಅಲಿ ಅವರ ಮೇಲ್ವಿಚಾರಣೆಯಲ್ಲಿ ನಡೆಯಿತು. ಶಿರ್ವ ಪೊಲೀಸ್ ಠಾಣಾಧಿಕಾರಿಗಳ ನೇತೃತ್ವದ ತಂಡ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು
ಶಿರ್ವ ಠಾಣೆಯ ಉಪನಿರೀಕ್ಷಕರಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ.ಎಸ್., ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ, ದಯಾನಂದ ಪ್ರಭು, ಅನ್ವರ್ ಅಲಿ, ಸಿದ್ದರಾಯಪ್ಪ, ಮಂಜುನಾಥ ಹೊಸಮನಿ, ಕಿರಣ್, ಶಿವಾನಂದಪ್ಪ, ಬಸವರಾಜ್, ಆರ್ಡಿಸಿ ವಿಭಾಗದ ದಿನೇಶ್, ಹಾಗೂ ಜೀವನ, ಬಸವರಾಜ್, ನಾಗರಾಜ್, ಪ್ರಕಾಶ್, ಜಗದೀಶ್, ಅರುಣ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ನಿರಂತರ ಸಾಧನೆಗೆ ಮೆಚ್ಚುಗೆ
ಕಳೆದ ಐದು ತಿಂಗಳಲ್ಲಿ ಶಿರ್ವ ಪೊಲೀಸರು ಅಂತರ್ರಾಜ್ಯ ಕಳ್ಳತನ ಜಾಲಗಳನ್ನು ಭೇದಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅಂತರ್ರಾಜ್ಯ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ, ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳ್ಳತನ ಪ್ರಕರಣದಲ್ಲಿ ರಶೀದ್ ಬಂಧನ, ನಕಲಿ ಚಿನ್ನವನ್ನು ಬ್ಯಾಂಕ್ನಲ್ಲಿ ಇಟ್ಟು ವಂಚಿಸಿದ ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬಂಧಿಸಿರುವುದು ಹಾಗೂ ಸೈಬರ್ ಕ್ರೈಂ ಪ್ರಕರಣದಲ್ಲಿ ಉತ್ತರ ಪ್ರದೇಶದ ಶುಭಾಮ್ ಶುಕ್ಲಾ ಬಂಧನ ಶಿರ್ವ ಪೊಲೀಸರ ಕಾರ್ಯಕ್ಷಮತೆಯನ್ನು ಸ್ಪಷ್ಟಪಡಿಸುತ್ತದೆ.
ತುಳುನಾಡ ರಕ್ಷಣಾ ವೇದಿಕೆ ಪ್ರಶಂಸೆ
ಶಿರ್ವ ಪೊಲೀಸರ ಈ ಕ್ಷಿಪ್ರ ಹಾಗೂ ಪರಿಣಾಮಕಾರಿ ಕಾರ್ಯಾಚರಣೆಗೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಸೇರಿದಂತೆ ಶಿರ್ವ ಹಾಗೂ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರು ಕಾಪು ವೃತ್ತ ನಿರೀಕ್ಷಕ ಅಜಮತ್ ಅಲಿ, ಶಿರ್ವ ಠಾಣಾಧಿಕಾರಿ ಹಾಗೂ ಸಿಬ್ಬಂದಿಯನ್ನು ಮನಪೂರ್ವಕವಾಗಿ ಪ್ರಶಂಸಿಸಿದ್ದಾರೆ.





