ಹಾಲು ಎಂದರೆ ಅದು ಸಂಪೂರ್ಣ ಆಹಾರ ಎಂದು ಪರಿಗಣಿಸಲಾಗುತ್ತದೆ. ಹಸುವಿನ ಹಾಲಿನಲ್ಲಿ ದೇಹವನ್ನು ಪೋಷಿಸುವ ಎಲ್ಲಾ ಪೂರಕ ಅಂಶಗಳಿವೆ ಎಂಬುದು ಜನಜನಿತ. ಹಸುವಿನ ಹಾಲು ನವಜಾತ ಶಿಶುವಿನಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅಗತ್ಯ ಆಹಾರ. ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು ವೈದ್ಯರು ಪ್ರತಿನಿತ್ಯ ಹಾಲು ಕುಡಿಯಲು ಶಿಫಾರಸು ಮಾಡುತ್ತಾರೆ. ಹಾಲಿನಿಂದ ನಮಗೆ ಸಿಗಬಹುದಾದ ಆರೋಗ್ಯ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ತಿಳಿಸಲು ಮತ್ತು ದೇಶದಲ್ಲಿ ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಕ್ಷೀರಕ್ರಾಂತಿಯ ಪಿತಾಮಹರಾದ ಡಾ. ವರ್ಗೀಸ್ ಕುರಿಯನ್ ಅವರ ಜನ್ಮದಿನವಾದ ನವೆಂಬರ್ 26ರಂದು ಭಾರತದಲ್ಲಿ ರಾಷ್ಟ್ರೀಯ ಹಾಲು ದಿನ ಎಂದು ಆಚರಿಸಲಾಗುತ್ತಿದೆ.

2023-24ರ ಅಂಕಿ ಅಂಶಗಳ ಪ್ರಕಾರ, ಭಾರತವು ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಮೂಡಿಬಂದಿದೆ. ಜಾಗತಿಕ ಹಾಲು ಉತ್ಪಾದನೆಯಲ್ಲಿ ಶೇಕಡಾ 24ರಷ್ಟು ಪಾಲು ಭಾರತದ್ದೇ ಆಗಿದೆ. 2023-24ರ ಅವಧಿಯಲ್ಲಿ ಹಾಲು ಉತ್ಪಾದನೆಯು ಸುಮಾರು 4% ಹೆಚ್ಚಾಗಿದ್ದು, ಒಟ್ಟು 230.58 ಮಿಲಿಯನ್ ಟನ್ಗಳಿಗೆ ತಲುಪಿದೆ. ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು 239.2 ಮಿಲಿಯನ್ ಟನ್ ಹಾಲು ಉತ್ಪಾದಿಸುತ್ತಿದೆ. ಇದು 2014-15ಕ್ಕೆ ಹೋಲಿಸಿದರೆ 63.56%ರಷ್ಟು ಏರಿಕೆಯಾಗಿದೆ. ಕಳೆದ 10 ವರ್ಷಗಳಲ್ಲಿ ಹಾಲು ಉತ್ಪಾದನೆಯು ಪ್ರತಿ ವರ್ಷ ಸರಾಸರಿ 5.7% ದರದಲ್ಲಿ ಸ್ಥಿರವಾಗಿ ಬೆಳೆಯುತ್ತಿದೆ. ಪ್ರಸ್ತುತ ಭಾರತವು ಹಾಲು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಶ್ರೇಯಸ್ಸು ಶ್ವೇತಕ್ರಾಂತಿಯ ಪಿತಾಮಹರಾದ ಡಾ.ವರ್ಗೀಸ್ ಕುರಿಯನ್ ಅವರಿಗೇ ಸಲ್ಲಬೇಕು. ವರ್ಗೀಸ್ ಕುರಿಯನ್ ಅವರು ದೇಶದಲ್ಲಿ ಹಾಲು ಉತ್ಪಾದನೆ ಮತ್ತು ಹೈನುಗಾರಿಕೆಯನ್ನು ಉತ್ತೇಜಿಸುವಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಈ ಕಾರಣದಿಂದಾಗಿಯೇ ಅವರನ್ನು “ಮಿಲ್ಕ್ ಮ್ಯಾನ್ ಆಫ್ ಇಂಡಿಯಾʼʼ ಎಂದು ಕರೆಯಲಾಗುತ್ತದೆ.
ಸಿರಿವಂತರಿಗಷ್ಟೇ ಸೀಮಿತವಾಗಿದ್ದ ಜನ ಸಾಮಾನ್ಯರಿಗೆ ದೂರದ ಮಾತು ಆಗಿದ್ದ ಹಾಲು ಹಾಗೂ ಅದರ ಸಹ ಉತ್ಪನ್ನಗಳು
ಸುಮಾರು 40- 50 ವರ್ಷಗಳ ಹಿಂದೆ ಅದು ಉಳ್ಳವರ ಪಾಲಿಗೆ ಮಾತ್ರ ಎಂಬಂತಿತ್ತು. ಸಾಮಾನ್ಯ ಜನರು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುವುದು ಕನಸಿನ ಮಾತು ಎಂಬಂತ ಪರಿಸ್ಥಿತಿ ಇತ್ತು. ಹಳ್ಳಿಗಾಡು ಪ್ರದೇಶಗಳಲ್ಲಂತೂ ಸಿರಿವಂತರು ಎಂದು ಪರಿಗಣಿಸಲ್ಪಡುತ್ತಿದ್ದ ಮನೆಗಳಲ್ಲಿ ಮಾತ್ರ ದನ, ಎಮ್ಮೆಗಳನ್ನು ಸಾಕಲು ಸಾಧ್ಯವಾಗುತ್ತಿದ್ದು, ಅವುಗಳ ಹಾಲು ಮತ್ತು ಅದರಿಂದ ಸಿಗುತ್ತಿದ್ದ ಉಪ ಉತ್ಪನ್ನಗಳು ಜನ ಸಾಮಾನ್ಯರನ್ನು ಮುಟ್ಟುವುದು ಅತ್ಯಂತ ಅಸಹಜವೇ ಆಗಿತ್ತು. ಬಡವರಿಗೆ ಹಾಲು ಮತ್ತು ಅದರ ಉಪ ಉತ್ಪನ್ನಗಳ ಬಳಕೆ ನೋಡಲು ಮಾತ್ರ ಸೀಮಿತ ಎಂಬಂತ್ತಿತ್ತು. ಒಂದು ರೀತಿಯಲ್ಲಿ ಹಾಲನ್ನು ಹಣ ಕೊಟ್ಟು ಖರೀದಿ ಮಾಡುವುದು ಕೂಡ ಬಡವರ ಪಾಲಿಗೆ ಗಗನಕುಸುಮ ಎಂಬಂತಿತ್ತು. ಆ ಸಮಯದಲ್ಲೇ ಡಾ.ವರ್ಗೀಸ್ ಕುರಿಯನ್ ಆರಂಭಿಸಿದ ಶ್ವೇತಕ್ರಾಂತಿ ಎಂಬ ಮಹಾಕ್ರಾಂತಿ ದೇಶದಲ್ಲೇ ಹಾಲಿನ ಉತ್ಪಾದನೆಯ ಪ್ರಮಾಣ ಹೆಚ್ಚಿಸಿತಲ್ಲದೆ, ಮನೆಮನೆಗಳಲ್ಲೂ ಆಕಳು ಕಾಣಿಸಿಕೊಳ್ಳಲು ಕಾರಣವಾಯಿತು. ಅಲ್ಲದೆ ಹಾಲಿನ ಉತ್ಪಾದನೆಯಲ್ಲಿ ಕೊರತೆ ಎಂಬ ಹಣೆಪಟ್ಟಿ ಕಳಚಿಕೊಂಡು ಸ್ವಾವಲಂಬಿ ಎಂಬ ಪಟ್ಟಕ್ಕೇರಲು ಇದು ಸಹಾಯ ಮಾಡಿತು. ಇದರ ಜೊತೆಜೊತೆಗೆ ಶ್ರೀಮಂತರ ಬಳಕೆಗೆ ಮಾತ್ರ ಎಂಬಂತಿದ್ದ ಹಾಲು ಮತ್ತು ಅದರ ಉಪ ಉತ್ಪನ್ನಗಳು ಬಡವರ ಮನೆ ಬಳಕೆಗೂ ಸಲೀಸಾಗಿ ಸಿಗತೊಡಗಿತು. ಬಡತನದಿಂದ ಬಳಲುತ್ತಿದ್ದ ಭಾರತದ ಗ್ರಾಮೀಣ ಜನ ಸ್ವಲ್ಪವಾದರೂ ಹಣದ ಮುಖ ನೋಡಲು ಸಾಧ್ಯವಾದದ್ದು ಡಾ.ವರ್ಗೀಸ್ ಕುರಿಯನ್ ಆರಂಭಿಸಿದ ಕ್ಷೀರ ಕ್ರಾಂತಿಯಿಂದ. ಮಹಿಳೆಯರು ಸ್ವಾವಲಂಬಿಗಳಾಗಲು, ಮಕ್ಕಳು ಪೌಷ್ಟಿಕ ಆಹಾರ ಪಡೆಯಲು ಕಾರಣವಾದ ಈ ಕ್ಷೀರ ಕ್ರಾಂತಿಯ ಪರಿಣಾಮದಿಂದಾಗಿಯೇ ಇಂದು ಹಾಲಿನ ಬೆಲೆ ಜನರ ಕೈಗೆಟುಕುವಂತಿದೆ. ಅಂದು ಹಾಲಿನ ಕ್ರಾಂತಿ ಮಾಡದೇ ಇರುತ್ತಿದ್ದರೆ ಇಂದು ಹಾಲಿನ ಬೆಲೆ ಪೆಟ್ರೋಲ್, ಡೀಸೆಲ್ ಮಾದರಿಯಲ್ಲಿರುತ್ತಿದ್ದರೂ ಆಶ್ಚರ್ಯ ಪಡಬೇಕಿಲ್ಲ. ಹಣ ಎಷ್ಟೇ ಕೊಟ್ಟರೂ ಲಭ್ಯತೆಯೂ ಇರುತ್ತಿರಲಿಲ್ಲ. ಒಂದು ಅಂಕಿ ಅಂಶದ ಪ್ರಕಾರ ದೇಶದ ಶೇ.25ರಷ್ಟು ಗ್ರಾಮಿಣ ಮಹಿಳೆಯರು ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಮಹಿಳೆಯೇ ಕುಟುಂಬದ ಮುಖ್ಯ ದುಡಿಮೆಯ ಮೂಲವಾಗಿರುವಲ್ಲಿ ಹೆಚ್ಚಿನವರು ಹೈನುಗಾರಿಕೆಯನ್ನೇ ಆಶ್ರಯಿಸಿದ್ದಾರೆ ಎಂಬುದನ್ನೂ ಅಧ್ಯಯನಗಳು ದೃಢಪಡಿಸಿವೆ.
ಡಾ.ವರ್ಗೀಸ್ ಕುರಿಯನ್ ಅವರು 1970ರ ದಶಕದಲ್ಲಿ ಶ್ವೇತಕ್ರಾಂತಿಯನ್ನು ಪ್ರಾರಂಭಿಸಿದರು. ಈ ಕ್ರಾಂತಿಯ ಮುಖ್ಯ ಉದ್ದೇಶ ಹಾಲು ಉತ್ಪಾದನೆಯ ಉತ್ತೇಜನ. 1965ರಿಂದ 1998ರವರೆಗೆ ಭಾರತದ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಡಾ.ವರ್ಗೀಸ್ ಕುರಿಯನ್ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ದೇಶದ ಮೂಲೆ ಮೂಲೆಯಲ್ಲೂ ಹಾಲು ಉತ್ಪಾದನೆಯನ್ನು ಉತ್ತೇಜಿಸುವ ಪ್ರಯತ್ನ ಮಾಡಿದ್ದರ ಫಲವಾಗಿ ಭಾರತವು ಇಂದು ಹಾಲು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ದೇಶದಲ್ಲಿ ಹಾಲು ಉತ್ಪಾದನೆಗೆ ಮಹತ್ತರ ಕೊಡುಗೆ ನೀಡಿದ ಡಾ.ವರ್ಗೀಸ್ ಕುರಿಯನ್ ಅವರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ (NDDB), ಇಂಡಿಯನ್ ಡೈರಿ ಅಸೋಸಿಯೇಷನ್ (IDA) ಮತ್ತು 22 ರಾಜ್ಯಮಟ್ಟದ ಡೈರಿ ಫೆಡರೇಷನ್ಗಳ ಸಹಯೋಗದಲ್ಲಿ 2014ರಲ್ಲಿ ನವೆಂಬರ್ 26ರಂದು ಮೊದಲ ಬಾರಿ ವರ್ಗೀಸ್ ಕುರಿಯನ್ ಅವರ ಜನ್ಮದಿನದಂದು ರಾಷ್ಟ್ರೀಯ ಹಾಲು ದಿನವೆಂದು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಾ.ವರ್ಗೀಸ್ ಕುರಿಯನ್ ಅವರ ಗೌರವಾರ್ಥ ನವೆಂಬರ್ 26ರಂದು ರಾಷ್ಟ್ರೀಯ ಹಾಲು ದಿನ ಆಚರಿಸಲಾಗುತ್ತಿದೆ.
ಭಾರತದಲ್ಲಿ ಹಾಲಿನ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ಹಾಲಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ರಾಷ್ಟ್ರೀಯ ಹಾಲು ದಿನದ ಆಚರಣೆಯ ಮುಖ್ಯ ಉದ್ದೇಶ. 2014ರಿಂದ ಈ ವಿಶೇಷ ದಿನವನ್ನು ಭಾರತದಲ್ಲಿ ಆಚರಿಸುತ್ತ ಬರಲಾಗುತ್ತಿದೆ. ನಮ್ಮ ದೈನಂದಿನ ಆಹಾರ ಮತ್ತು ಆರ್ಥಿಕತೆಯಲ್ಲಿ ಹಾಲಿನ ಬಳಕೆಯು ಅತ್ಯಂತ ಪ್ರಾಮುಖ್ಯತೆಯುಳ್ಳದ್ದಾಗಿದ್ದು, ಈ ದಿನದಂದು ಜನರಿಗೆ ಡೈರಿ ಉತ್ಪನ್ನಗಳು ಮತ್ತು ಹಾಲಿನ ಪ್ರಯೋಜನಗಳ ಬಗ್ಗೆ ತಿಳಿಸಲು ಅಭಿಯಾನ, ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಡಾ. ವರ್ಗೀಸ್ ಕುರಿಯನ್; ಅಮುಲ್ ಸೃಷ್ಟಿ
ದೇಶದ ಕ್ಷೀರಕ್ರಾಂತಿಯ ಪಿತಾಮಹ ಎಂದೇ ಹೆಸರಾದವರು ಡಾ.ವರ್ಗೀಸ್ ಕುರಿಯನ್. ‘ಅಮುಲ್’ ಎಂಬುದು ಇಂದು ವಿಶ್ವದಲ್ಲೇ ಜನಪ್ರಿಯವಾದ ಹಾಲಿನ ಉತ್ಪನ್ನಗಳ ಬ್ರಾಂಡ್. ಆ ಹೆಸರಿನ ಹಿಂದಿರುವ ತಾರೆಯೇ ವರ್ಗೀಸ್ ಕುರಿಯನ್. ಕೇರಳದ ಕೊಯಿಕೋಡಿನಲ್ಲಿ ಜನಿಸಿದ ಕುರಿಯನ್ ಅಮೆರಿಕದಲ್ಲಿಇಂಜಿನಿಯರಿಂಗ್ ಪದವಿ ಪಡೆದು, ಬೆಂಗಳೂರಿನ ಡೈರಿ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು. ಅಮೆರಿಕದಿಂದ 1948ರಲ್ಲಿ ಭಾರತಕ್ಕೆ ಹಿಂದಿರುಗಿದ ವರ್ಗೀಸ್ ಕುರಿಯನ್, ಸರಕಾರಿ ಸೇವೆಗೆ ಸೇರಿ ಗುಜರಾತಿನ ಆನಂದ್ ನಗರದಲ್ಲಿದ್ದ ಹಾಲಿನ ಪೌಡರ್ ಉತ್ಪಾದಿಸುವ ಸಣ್ಣ ಘಟಕವೊಂದರಲ್ಲಿ ತಂತ್ರಜ್ಞರಾಗಿ ಕೆಲಸಕ್ಕೆ ಸೇರಿದರು. ಇದೇ ಸಮಯದಲ್ಲಿ ಕೈರಾ ಜಿಲ್ಲೆಯ ಹಾಲು ಉತ್ಪಾದನಾ ಸಂಘಟನೆ ತನ್ನ ಉಳಿಗಾಲಕ್ಕಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿದ ವರ್ಗೀಸ್ ಕುರಿಯನ್, ಸರಕಾರಿ ಸೇವೆ ತ್ಯಜಿಸಿ ಆ ಸಂಸ್ಥೆಗೆ ಜೀವ ತುಂಬಲು ಮುಂದಾದರು. ಸದಸ್ಯರ ಸಹಕಾರ, ಯೋಜಿತ ಉತ್ಪಾದನೆ ಮತ್ತು ಮಾರಾಟಗಳಿಂದ ಸಂಸ್ಥೆಯನ್ನು ಎಬ್ಬಿಸಿದರು. ಕುರಿಯನ್ನರ ಈ ಸಾಹಸ ‘ಅಮುಲ್'(ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್) ಎಂಬ ಹೊಸ ಚರಿತ್ರೆಗೆ ನಾಂದಿ ಹಾಡಿತು. ಗುಜರಾತ್ ಹಾಲಿನ ಒಕ್ಕೂಟದ ಯಶಸ್ಸು ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮ ಸ್ಥಾಪಿಸಲು ಪ್ರೇರೇಪಿಸಿತು. ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿ ಡಾ.ವರ್ಗೀಸ್ ಕುರಿಯನ್ ಅವರನ್ನೇ ಅದರ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 1965ರಲ್ಲಿರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾದ ವರ್ಗೀಸ್ ಕುರಿಯನ್ನರು ಮುಂದೆ 1973ರಲ್ಲಿಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಸ್ಥಾಪಿಸಿ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸಮರ್ಥವಾಗಿ ವಿತರಣೆಯಾಗುವಂತೆ ವ್ಯವಸ್ಥೆ ಮಾಡಿದರು. 1970ರಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಪ್ರಾರಂಭಿಸಿದ ಆಪರೇಷನ್ ಫ್ಲಡ್ ಕಾರ್ಯಕ್ರಮದ ಅಡಿಯಲ್ಲಿ ವರ್ಗೀಸ್ ಕುರಿಯನ್ ತೆಗೆದುಕೊಂಡ ಹಲವಾರು ಉಪಕ್ರಮಗಳು ಭಾರತವನ್ನು ಹಾಲಿನ ಕೊರತೆಯ ದೇಶದಿಂದ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿ ಪರಿವರ್ತಿಸಿದವು. ಆಪರೇಷನ್ ಫ್ಲಡ್ನ ಯಶಸ್ಸು ವಿಶ್ವದ ಅತಿದೊಡ್ಡ ಕೃಷಿ ಚಳವಳಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಕ್ರಾಂತಿಯು ಸಾಮಾನ್ಯ ಜನರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅತಿ ಸುಲಭವಾಗಿ ತಲುಪುವಂತೆ ಮಾಡಿದ್ದಲ್ಲದೆ, ಲಕ್ಷಾಂತರ ಗ್ರಾಮೀಣ ಹೈನುಗಾರರಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಥಿರವಾದ ಆದಾಯದ ಮೂಲವನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸಿತು.
ಕರ್ನಾಟಕದಲ್ಲಿ ಡೈರಿ ಸಹಕಾರಿ ಆಂದೋಲನ
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಫೆಡರೇಶನ್ ಲಿಮಿಟೆಡ್ (ಕೆಎಂಎಫ್) ಕರ್ನಾಟಕದ ಡೈರಿ ಸಹಕಾರಿ ಆಂದೋಲನವನ್ನು ಮುನ್ನಡೆಸಿದ ಸಂಸ್ಥೆ. 1974ರಲ್ಲಿ ದೇಶದಲ್ಲಿಮೊದಲ ಬಾರಿ ವಿಶ್ವ ಬ್ಯಾಂಕ್ ಧನಸಹಾಯ ಪಡೆದು ಗ್ರಾಮ ಮಟ್ಟದ ಡೈರಿ ಡೆವಲಪ್ಮೆಂಟ್ ಕೋಆಪರೇಟಿವ್(ಕೆಡಿಡಿಸಿ) ಸಂಘಟನೆಗಳೊಂದಿಗೆ ಇದು ಆರಂಭಗೊಂಡಿತು. ಇಂದು ಇದು ದೇಶದ ಡೈರಿ ಸಹಕಾರಿ ಸಂಸ್ಥೆಗಳಲ್ಲಿಎರಡನೇ ಅತಿದೊಡ್ಡ ಸಂಸ್ಥೆಯಾಗಿದೆ. ದಕ್ಷಿಣ ಭಾರತದಲ್ಲಿ ಇದು ಹಾಲು ಮತ್ತು ಹಾಲಿನ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಶುದ್ಧ ಮತ್ತು ತಾಜಾ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬ್ರಾಂಡ್ನೇಮ್ ‘ನಂದಿನಿ’ ಮನೆಮಾತಾಗಿದೆ. ಪ್ರಾಥಮಿಕ ಡೈರಿ ಕೋಆಪರೇಟಿವ್ ಸೊಸೈಟಿಗಳಿಂದ (ಡಿಸಿಎಸ್) ಹಾಲು ಸಂಗ್ರಹಿಸುವ ಮತ್ತು ಕರ್ನಾಟಕದ ವಿವಿಧ ನಗರ ಗ್ರಾಮೀಣ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಹಾಲು ವಿತರಿಸುವ ಕೆಎಂಎಫ್ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡು ಹಾಲು ಸಂಘಗಳನ್ನು ಹೊಂದಿದೆ. ಮೂರು ಹಂತದ ಸಹಕಾರಿ ಸಂಘಟನೆ ಮಾದರಿಯಲ್ಲಿ ಅಂದರೆ ಗ್ರಾಮ ಮಟ್ಟದಲ್ಲಿ ಡೈರಿ ಕೋ ಆಪರೇಟಿವ್ ಸೊಸೈಟಿ, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ಖರೀದಿ, ಸಂಸ್ಕರಣೆ ಮತ್ತು ಮಾರುಕಟ್ಟೆ ಬಗ್ಗೆ ಕಾಳಜಿ ವಹಿಸುತ್ತವೆ ಮತ್ತು ಉತ್ಪಾದಕರ ಮಟ್ಟದಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ತಾಂತ್ರಿಕ ನೆರವು ಒದಗಿಸುತ್ತವೆ. ರಾಜ್ಯ ಫೆಡರೇಶನ್ ಒಟ್ಟಾರೆ ರಾಜ್ಯದ ಚಟುವಟಿಕೆಯನ್ನು ಸಮನ್ವಯಗೊಳಿಸುತ್ತದೆ. ಸಹಕಾರಿ ಹೈನುಗಾರಿಕೆಯ ಆಧಾರದ ಮೇಲೆ ಸ್ವಾವಲಂಬಿ ಗ್ರಾಮೀಣ ಆರ್ಥಿಕತೆಯನ್ನು ರಚಿಸುವಲ್ಲಿ ಕೆಎಂಎಫ್ ಪಾತ್ರ ಮಹತ್ವದ್ದು.
ಭಾರತದಲ್ಲಿ ಗುಜರಾತ್ ಮತ್ತು ಕರ್ನಾಟಕ ಹೆಚ್ಚಿನ ಹಾಲು ಉತ್ಪಾದನೆ ನಡೆಸುತ್ತಿದ್ದರೂ, ಇತರ ರಾಜ್ಯಗಳೂ ಹಿಂದೆ ಬಿದ್ದಿಲ್ಲ. ಪ್ರತಿ ರಾಜ್ಯವೂ ಅದರದೇ ಹಾಲು ಒಕ್ಕೂಟ ರಚಿಸಿಕೊಂಡು ಗ್ರಾಮೀಣ ರೈತರಿಗೆ ಆದಾಯ ಒದಗಿಸಲು ಶ್ರಮಿಸಿವೆ. ಇವುಗಳಲ್ಲಿಹೆಚ್ಚಿನ ಸಾಧನೆ ಮಾಡಿದ ಸಂಸ್ಥೆಗಳೆಂದರೆ ಉತ್ತರ ಪ್ರದೇಶದ ನೋಯಿಡಾದ ಮದರ್ ಡೈರಿ, ಗುಜರಾತ್ನ ಮೆಹ್ಸಾನಾದ ದೂದ್ಸಾಗರ್, ಕೇರಳದ ಮಿಲ್ಮಾ ಹಾಲು ಸಹಕಾರ ಒಕ್ಕೂಟ, ತಮಿಳುನಾಡಿನ ಆವಿನ್ ಹಾಲು ಸಹಕಾರ ಒಕ್ಕೂಟ, ಪಂಜಾಬ್ನ ವರ್ಕಾ ಹಾಲು ಸೊಸೈಟಿ, ಬಿಹಾರದ ಸುಧಾ ಡೈರಿ ಇತ್ಯಾದಿ.
ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ;
ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬುಗಳಲ್ಲಿ ಪ್ರಮುಖವಾದುದು ಎಂದರೆ ಕೃಷಿ. ಇನ್ನೊಂದು ಹೈನುಗಾರಿಕೆ. ದೇಶದ ಸುಮಾರು 2 ಕೋಟಿ ಜನ ತಮ್ಮ ದೈನಂದಿನ ಬದುಕಿಗೆ ಜಾನುವಾರುಗಳನ್ನು ಆಶ್ರಯಿಸಿದ್ದಾರೆ. ಇಂದು ಭಾರತೀಯರ ದೈನಂದಿನ ಸರಾಸರಿ ಹಾಲು ಲಭ್ಯತೆ 375 ಗ್ರಾಂ. ದೇಶದಲ್ಲಿ19 ಕೋಟಿ ದನಗಳು, 11 ಕೋಟಿ ಎಮ್ಮೆಗಳಿರಬಹುದು ಎಂಬ ಅಂದಾಜು. ಇವುಗಳಿಂದ ಸುಮಾರು 1.5 ಕೋಟಿ ಮಂದಿಗೆ ಉದ್ಯೋಗ ದೊರೆತಿದೆ. ದನ- ಎಮ್ಮೆಗಳು ಹಾಲಿನ ಜೊತೆಗೆ ಗೊಬ್ಬರವನ್ನೂ ನೀಡಿ ತಲಾಂತರಗಳಿಂದ ಕೃಷಿಯನ್ನು ಪೊರೆದಿವೆ. ಹೈನುಗಾರಿಕೆ ನಮ್ಮವರಿಗೆ ಕೇವಲ ಉದ್ಯೋಗವಷ್ಟೇ ಅಲ್ಲದೆ, ಜೀವನಶೈಲಿಯೂ ಆಗಿದೆ. ಗ್ರಾಮೀಣರು ತಮ್ಮ ದನಕರುಗಳನ್ನು ದೇವರೆಂದೇ ಭಾವಿಸುತ್ತಾರೆ. ದೇಶದ ಶೇ.25ರಷ್ಟು ಗ್ರಾಮಿಣ ಮಹಿಳೆಯರು ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಅಧ್ಯಯನಗಳು ತಿಳಿಸುತ್ತವೆ. ಮಹಿಳೆಯೇ ಕುಟುಂಬದ ಮುಖ್ಯ ದುಡಿಮೆಯ ಮೂಲವಾಗಿರುವಲ್ಲಿ ಹೆಚ್ಚಿನವರು ಹೈನುಗಾರಿಕೆಯನ್ನು ಆಶ್ರಯಿಸಿದ್ದಾರೆ.
ಭಾರತದ ಹಾಲಿನ ಉತ್ಪಾದನೆಯ ಕಿರು ನೋಟ
15: ರಾಜ್ಯಮಟ್ಟದ ಸಹಕಾರಿ ಹಾಲು ಉತ್ಪಾದನೆ ಸಂಘಗಳು
189: ಜಿಲ್ಲಾಹಾಲು ಉತ್ಪಾದಕರ ಸಂಘಗಳು
1.56 ಲಕ್ಷ: ಗ್ರಾಮೀಣ ಸಹಕಾರಿ ಸಂಘಗಳು
1.52 ಕೋಟಿ: ಹಾಲು ಉತ್ಪಾದಕರು
45 ಲಕ್ಷ: ಮಹಿಳಾ ಸದಸ್ಯರು
17.8 ಕೋಟಿ ಟನ್: ವಾರ್ಷಿಕ ಹಾಲು ಉತ್ಪಾದನೆ


