ಉಳ್ಳಾಲ: ಛಾಯಾಗ್ರಹಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಹಿರಿಯ ಛಾಯಾಗ್ರಹಕ ಅಶೋಕ್ ಅವರನ್ನು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.), ಉಳ್ಳಾಲ ವಲಯವು ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಸನ್ಮಾನಿಸಿತು.
1956ರ ಅಕ್ಟೋಬರ್ 8ರಂದು ಜನಿಸಿದ ಅವರು, ಕಳೆದ 30 ವರ್ಷಗಳಿಂದ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ಅಹೋರಾತ್ರಿ ಶ್ರಮವಹಿಸಿದ್ದಾರೆ. 1975ರಲ್ಲಿ ಮುಂಬೈನಲ್ಲಿ ತಮ್ಮ ಮೊದಲ ಕ್ಯಾಮೆರಾವನ್ನು ಖರೀದಿಸಿ ಹವ್ಯಾಸಿ ಛಾಯಾಗ್ರಹಕರಾಗಿ ಆರಂಭಿಸಿದ ಅವರು, ನಂತರ ಊರಿನಲ್ಲಿ ಪೂರ್ಣಕಾಲಿಕ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಿದರು.
ಅನೇಕ ಶುಭ ಕಾರ್ಯಕ್ರಮಗಳ ಅವಿಸ್ಮರಣೀಯ ಕ್ಷಣಗಳನ್ನು ತಮ್ಮ ಕ್ಯಾಮೆರಾ ಕಣ್ಗಳಲ್ಲಿ ಸೆರೆಹಿಡಿದು ಅನೇಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಡಿಯೋಗ್ರಾಫರ್ ಆಗಿ ಅಪಾರ ಅನುಭವವನ್ನು ಸಂಪಾದಿಸಿರುವ ಅವರು, ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಕೌಶಲ್ಯ ಮತ್ತು ನಿಷ್ಠೆಯಿಂದ ಗುರುತಿಸಿಕೊಂಡಿದ್ದಾರೆ.
ಪತ್ನಿ ತಾರಾ, ಮಗ ಅಖಿಲೇಶ್, ಸೊಸೆ ಶ್ರುತಿ ಹಾಗೂ ಮೊಮ್ಮಕ್ಕಳಾದ ಆರಾಧ್ಯ ಮತ್ತು ಸಾನಿಧ್ಯ ಅವರೊಂದಿಗೆ ಸುಖೀ ಜೀವನ ಸಾಗಿಸುತ್ತಿರುವ ಇವರಿಗೆ ಈ ಸನ್ಮಾನ ದೊರೆತಿರುವುದು ಛಾಯಾಗ್ರಹಣ ಕ್ಷೇತ್ರದ ಸಹೋದ್ಯೋಗಿಗಳಿಗೂ ಹೆಮ್ಮೆಯ ವಿಷಯವಾಗಿದೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದರು.


