ಉಡುಪಿ: ಜಿಲ್ಲೆಯಲ್ಲಿ ಕಾರ್ಮಿಕರ ಹಕ್ಕು ಉಲ್ಲಂಘನೆ, ತಡವಾದ ವೇತನ, ಆರೋಗ್ಯ ಹಾಗೂ ಸುರಕ್ಷತೆ ಸೌಲಭ್ಯಗಳ ಕೊರತೆ ಮುಂತಾದ ಸಮಸ್ಯೆಗಳ ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ತುಳುನಾಡ ರಕ್ಷಣಾ ವೇದಿಕೆ ಮನವಿ ಸಲ್ಲಿಸಿದೆ.
ವೇದಿಕೆ ಕಳೆದ 16 ವರ್ಷಗಳಿಂದ ಕಾರ್ಮಿಕ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರಿಗೆ ಕೆಲವೊಂದು ಉದ್ಯೋಗ ಸ್ಥಳಗಳಲ್ಲಿ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ದೂರುಗಳು ಬರುತ್ತಿದೆ. ಈ ಹಿನ್ನೆಲೆಯಲ್ಲಿ ವೇದಿಕೆಯಿಂದ ಪ್ರಮುಖವಾಗಿ ನಾಲ್ಕು ಬೇಡಿಕೆಗಳು ಮುಂದಿಟ್ಟಿವೆ:
1. ಸಮಯಕ್ಕೆ ವೇತನ ವಿತರಣೆ: ನಿಗದಿತ ದಿನಾಂಕಕ್ಕೆ ವೇತನ ಬಿಡುಗಡೆ ಆಗಲು ಕಾನೂನುಬದ್ಧ ನಿರ್ದೇಶನ ನೀಡಬೇಕು.
2. ಕಾಯ್ದೆಯ ಅನುಸಾರ ಕೆಲಸದ ಅವಧಿ: ಹೆಚ್ಚುವರಿ ಸಮಯ ಕೆಲಸ ಮಾಡಿಸಿದಲ್ಲಿ, ಅದಕ್ಕೆ ತಕ್ಕ ರೀತಿಯ ಸಂಬಳ ಸಿಗಬೇಕೆಂದು ಆಗ್ರಹಿಸಲಾಗಿದೆ.
3. ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳು: ಕಾರ್ಮಿಕರ ಆರೋಗ್ಯ ಹಾಗೂ ಸುರಕ್ಷತೆಗೆ ಅನುಕೂಲವಾಗುವ ಸೌಲಭ್ಯಗಳನ್ನು ಕಡ್ಡಾಯಗೊಳಿಸಬೇಕು.
4. ಕಾನೂನುಗಳ ಅನುಸರಣೆ: ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಅಸ್ತಿತ್ವದಲ್ಲಿರುವ ಎಲ್ಲಾ ಕಾನೂನುಗಳ ನಿರ್ದಾಕ್ಷಿಣ್ಯ ಅನುಸರಣೆ ಖಚಿತಪಡಿಸಬೇಕು. ಹಾಗೂ
ಕಾರ್ಮಿಕ ಕ್ಷೇತ್ರದಲ್ಲಿ ದುಡಿಯುವ ವಿಶೇಷ ಚೇತನರಿಗೆ (ವಿಕಲಚೇತನರಿಗೆ) ಉತ್ತಮ ವೇತನ ಹಾಗೂ ಸೌಲಭ್ಯ ನೀಡುವಂತೆ ಈ ಸಂದರ್ಭದಲ್ಲಿ ಮನವಿಯನ್ನು ಕೂಡಾ ಸಲ್ಲಿಸಲಾಯಿತು.


ಈ ಮನವಿಯನ್ನು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರ ನೇತೃತ್ವದಲ್ಲಿ ಸಚಿವರಿಗೆ ಹಸ್ತಾಂತರಿಸಲಾಯಿತು. ಜೊತೆಗೆ ಮಹಿಳಾ ಘಟಕ ಅಧ್ಯಕ್ಷೆ ಸುನಂದ ಕೋಟ್ಯಾನ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ ಪೂಜಾರಿ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಬಾನಬೆಟ್ಟು, ವೈದ್ಯರ ಘಟಕ ಜಿಲ್ಲಾದ್ಯಕ್ಷ ಡಾ. ಸಂದೀಪ್ ಸನಿಲ್ , ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಾಲ್ ಅಮೀನ್, ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಂ ಡಿ. ಕೋಸ್ತ ಕಟಪಾಡಿ, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಪ್ರದೀಪ್ ಚಾಂತರ್, ಕಾರ್ಕಳ ತಾಲೂಕು ಅಧ್ಯಕ್ಷ ರಮಕಾಂತ್ ಶೆಟ್ಟಿ ಉದಯ ಹಿರಿಯಡ್ಕ, ಅಬ್ದುಲ್ಲ , ಶಂಕರ್ ಉಡುಪಿ, ಮಮತಾ , ಜ್ಯೋತಿ ಆರ್ ಬನ್ನಂಜೆ, ಸರ್ವೋತ್ತಮ ಶೆಟ್ಟಿ, ರೋಷನ್ ಉಡುಪಿ , ಅಜಯ್ ಶೆಟ್ಟಿ ಮತ್ತಿತರರ ಹಲವು ಮುಖಂಡರು ಉಪಸ್ಥಿತರಿದ್ದರು.





