ಉಳ್ಳಾಲ: ಮಂಗಳೂರು ಕಡೆಯಿಂದ ತಲಪಾಡಿ ಗಡಿ ಪ್ರದೇಶದಲ್ಲಿ ಇರುವ ಹಲವಾರು ಮರದ ಮಿಲ್ಲು – ಫ್ಲೈವುಡ್ ಕಾರ್ಖಾನೆಗಳಿಗೆ ದಿನದ 24 ಗಂಟೆಯೂ ಮರದ ದಿಮ್ಮಿಗಳು ನಿರಂತರವಾಗಿ ಓವರ್ ಲೋಡ್ ಆಗಿ ಹೋಗುತ್ತಿದ್ದು ನಿನ್ನೆ ರಾತ್ರಿ ಹೊತ್ತು ಬೀರಿ ಸಮೀಪದ ಉಚ್ಚಿಲದಲ್ಲಿ ಟಯರ್ ಬ್ಲಾಸ್ಟ್ ಆಗಿ ಲಾರಿಯೊಂದು ನಡು ರಸ್ತೆಯಲ್ಲಿ ಬಾಕಿಯಾಗಿದೆ.
ದೇವಿಪುರ ದೇವಸ್ಥಾನ ರಸ್ತೆ ಮತ್ತು ಟೋಲ್ ಮುಖಾಂತರ ಪಾಸಾಗಿ ಲಘು ವಾಹನಗಳು ಇದ್ದ ರಸ್ತೆಯನ್ನೇ ಉಪಯೋಗಿಸಿಕೊಂಡು ಕಳ್ಳ ಮಾರ್ಗದ ಮೂಲಕ ಜನವಸತಿ ಪ್ರದೇಶದ ಜಾಗದಲ್ಲಿ ಅಣಬೆಗಳು ಹುಟ್ಟಿದಂತೆ ಹುಟ್ಟಿಕೊಂಡ ಹತ್ತಾರು ಅಕ್ರಮ ಮರದ ಮಿಲ್ಲುಗಳಿಗೆ ಮರಗಳು ಸಾಗುತ್ತಿದೆ. ಕೆಲವು ಅಧಿಕಾರಿಗಳು, ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳ ತುಂಬು ಹೃದಯದ ಸಹಕಾರದಿಂದ ಜನವಸತಿ ಪ್ರದೇಶದಲ್ಲಿ ಅಕ್ರಮ ಕೈಗಾರಿಕಾ ಪ್ರದೇಶದಂತೆ ಮಾಡಿ ಈ ಅಕ್ರಮ ಮಿಲ್ಲುಗಳು ತಲೆಯೆತ್ತಿವೆ
ತಲಪಾಡಿಯಿಂದ ದೇವಿಪುರ ತನಕ ಆದ ಸುಂದರ ಕಾಂಕ್ರೀಟ್ ರಸ್ತೆಯು ಇಲ್ಲಿ ಹಾದು ಹೋಗುವ ಈ ಅಕ್ರಮ ದಂದೆಕೋರರ ಕಾರುಬಾರಿನಿಂದ ಹಲವಾರು ವರ್ಷಗಳು ಬಾಳಿಕೆ ಬರಬೇಕಾದ ರಸ್ತೆಯು ಬಿರುಕುಬಿಟ್ಟು ಸಂಪೂರ್ಣ ಹಾಳಾಗಿ ಹೋಗಿದೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಎಕ್ಕೂರು ಬಳಿ ಕೂಡ ಲಾರಿ ಅಫಘಾತ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗುವ ಸಂಭವವಿದೆ. ಇದೇ ರೀತಿ ಮುಂದುವರೆದರೆ ತಲಪಾಡಿ ಗ್ರಾಮದ ಸಾರ್ವಜನಿಕರನ್ನು ಸೇರಿಸಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಯಶು ಪಕ್ಕಳ ತಲಪಾಡಿ ಜಿಲ್ಲಾಡಳಿತವನ್ನು ಒತ್ತಾಯಿಸಿದಾರೆ.

