ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರವಾದ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗುವ ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ, ಅರ್ಧಕುಮಾರಿ ಬಳಿ ಇರುವ ಇಂದ್ರಪ್ರಸ್ಥ ಭೋಜನಾಲಯದ ಸಮೀಪ ಈ ಭೂಕುಸಿತ ಸಂಭವಿಸಿತು.
ಘಟನೆಯ ವೇಳೆ, ಮಾರ್ಗದಲ್ಲಿ ನೂರಾರು ಯಾತ್ರಿಕರು ಸಾಗುತ್ತಿರುವ ವೇಳೆ ಹಿಮಪಾತದಂತ ಭೂಕುಸಿತ ಉಂಟಾಗಿದ್ದು, ಹಲವರು ಮಣ್ಣಿನಡಿ ಸಿಲುಕಿದ್ದರು. ಗಾಯಗೊಂಡವರನ್ನು ತ್ವರಿತವಾಗಿ ಕತ್ರಾ ಮತ್ತು ಜಮ್ಮುವಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ನಿರಂತರ ಮಳೆಯಿಂದಾಗಿ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಹಾನಿಯಾಗಿದೆ. ಜಮ್ಮು-ಶ್ರೀನಗರ ಮತ್ತು ಕಿಶ್ತ್ವಾರ್-ದೋಡಾ ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದ್ದು, ಹಲವಾರು ಪರ್ವತದ ಮಾರ್ಗಗಳು ಭೂಕುಸಿತ ಮತ್ತು ತೀವ್ರ ಪ್ರವಾಹದಿಂದ ನಾಶವಾಗಿದೆ.
ವಿದ್ಯುತ್ ಕಂಬಗಳು ಮತ್ತು ಮೊಬೈಲ್ ಟವರ್ಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ದೂರಸಂಪರ್ಕ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಂಬಂಧಿಕರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸ್ಪತ್ರೆಗಳು ಮತ್ತು ಮೂಲ ಶಿಬಿರಗಳಲ್ಲಿ ಜನರು ಮುಗಿ ಬಂದಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಭಾರತೀಯ ಸೇನೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳ ಮೂವರು ತುಕಡಿಗಳು ಕತ್ರಾ, ಠಾಕೂರ್ ಕೋಟ್ ಹಾಗೂ ಜೌರಿಯನ್ ಪ್ರದೇಶಗಳಲ್ಲಿ ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.
