ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಕೆಂಪುಕಲ್ಲು, ಮರಳು ಹಾಗೂ ಇತರ ನಿರ್ಮಾಣ ಸಾಮಗ್ರಿಗಳ ತೀವ್ರ ಅಭಾವ ಉಂಟಾಗಿ, ನಿರ್ಮಾಣ ಕಾರ್ಯಗಳು ಸಂಪೂರ್ಣವಾಗಿ ನಿಂತುಹೋಗಿವೆ. ಈ ಪರಿಣಾಮದಿಂದಾಗಿ ನೂರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಉದ್ಯೋಗವಿಲ್ಲದೆ ತೊಂದರೆಗೆ ಒಳಗಾಗುತ್ತಿದ್ದಾರೆ.
ವಿಶೇಷವಾಗಿ ದಿನ ಕೂಲಿ ಕೆಲಸದಲ್ಲಿ ಜೀವನ ನಿರ್ವಹಿಸುತ್ತಿರುವ ಕಾರ್ಮಿಕರು, ಕೆಲ ದಿನಗಳೂ ಕೆಲಸವಿಲ್ಲದ ಕಾರಣ ತಮ್ಮ ಕುಟುಂಬದ ಆಧಾರಗಳಾದ ಆಹಾರ, ಆರೋಗ್ಯ, ಮಕ್ಕಳ ಶಿಕ್ಷಣ ಮೊದಲಾದ ಎಲ್ಲಾ ಮೂಲಭೂತ ಅಗತ್ಯಗಳನ್ನು ಪೂರೈಸಲಾಗದ ಸ್ಥಿತಿಗೆ ತಲುಪಿದ್ದಾರೆ. ಇವರು ಆರ್ಥಿಕ ಉಳಿತಾಯವಿಲ್ಲದ, ಪ್ರತಿದಿನವೂ ದುಡಿದು ದಿನಚರ್ಯೆ ನಿರ್ವಹಿಸುವವರು. ಇದರಿಂದಾಗಿ ಇಡೀ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುತ್ತಿವೆ.
ಈ ಸಮಸ್ಯೆಯು ಕೇವಲ ಕಾರ್ಮಿಕರಷ್ಟೇ ಅಲ್ಲದೆ, ಲಾರಿ, ಟಿಪ್ಪರ್ ಮಾಲಕರು, ಗುತ್ತಿಗೆದಾರರು ಹಾಗೂ ನಿರ್ಮಾಣ ಸಾಮಗ್ರಿ ವ್ಯವಹಾರಗಾರರಿಗೂ ತೀವ್ರ ಸಂಕಷ್ಟ ಉಂಟುಮಾಡಿದೆ. ಈ ಅವ್ಯವಸ್ಥೆಯಿಂದ ನಮ್ಮ ಜಿಲ್ಲೆಯ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ.
1) ತಕ್ಷಣಕ್ಕೆ ಜಿಲ್ಲಾಡಳಿತದ ವತಿಯಿಂದ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸುತ್ತೇವೆ.
2) ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ತಾತ್ಕಾಲಿಕ ಸಹಾಯಧನ ಅಥವಾ ಆಹಾರ ಕಿಟ್ ನೀಡುವ ವ್ಯವಸ್ಥೆ ಮಾಡಬೇಕಾಗಿ ಕೋರಲಾಗುತ್ತಿದೆ.
3) ನಿರ್ಮಾಣ ಸಾಮಗ್ರಿಗಳ ತೀವ್ರ ಕೊರತೆಯ ನಿಖರವಾದ ಕಾರಣವನ್ನು ಗುರ್ತಿಸಿ, ಸರಬರಾಜು ಪುನರಾರಂಭವಾಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ.
4) ವಲಸಿಕಾರ್ಮಿಕರ ಸಹಾಯಕ್ಕಾಗಿ ವಿಶೇಷ ಶಿಬಿರ ಅಥವಾ ಸಲಹಾ ಕೇಂದ್ರ ಸ್ಥಾಪನೆ ಮಾಡಲು ತುರ್ತು ಸಭೆ ನಡೆಸಿ
ಉಡುಪಿ ಜಿಲ್ಲೆಯ ನೂರಾರು ಕಾರ್ಮಿಕ ಕುಟುಂಬಗಳು ಮತ್ತು ಸಾರ್ವಜನಿಕರು ಸಮಸ್ಯೆ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಆದುದರಿಂದ ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ರವರನ್ನು ಭೇಟಿ ನೀಡಿ ಮನವಿ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಬಾಣಬೆಟ್ಟು, ಕಾರ್ಮಿಕ ಘಟಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ, ಬ್ರಹ್ಮಾವರ ತಾಲೂಕು ಅಧ್ಯಕ್ಷ ದೀಪು ಚಾಂತರ್, ಕಾಪು ತಾಲೂಕು ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಕಾಪು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಜ್ಯೋತಿ ಆರ್. ಮಮತ ಪೂಜಾರಿ, ವಿನೋದ್ ಕುಲಾಲ್, ರೋಹಿಣಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
