ಮಂಗಳೂರು, ಆಗಸ್ಟ್ 20: ಸರ್ಕಾರಿ ಸೇವೆಗಳಲ್ಲಿ ಯುವಜನರ ಆಕರ್ಷಣೆ ಹೆಚ್ಚಿಸುವ ಹಾಗೂ ಐಎಎಸ್, ಐಪಿಎಸ್ ಹೀಗೆ ಉನ್ನತ ಹುದ್ದೆಗಳನ್ನು ಗುರಿಯಾಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯ ರೂಪದಲ್ಲಿ, ಕೂಳೂರು ಘಟಕದ ಕಥೋಲಿಕ್ ಸಭಾ ಮತ್ತು ಎಪಿಸ್ಕೋಪಲ್ ಸಿಟಿ ವಲಯದ ಸಹಯೋಗದಲ್ಲಿ “ಪ್ರೇರಣ್ – ಕ್ಯಾಚ್ ದೆಮ್ ಯಂಗ್” ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಈ ಶಿಬಿರವು ಕೂಳೂರು ಚರ್ಚಿನ ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ 7ನೇ ತರಗತಿಯಿಂದ ಪಿಯುಸಿ ಮತ್ತು ಪದವಿ ಅಧ್ಯಯನದಲ್ಲಿರುವ ವಿದ್ಯಾರ್ಥಿಗಳಿಗಾಗಿ ನಾಗರಿಕ ಸೇವೆಗಳ ಕುರಿತು ಮಾಹಿತಿ ಮತ್ತು ಪ್ರೇರಣಾತ್ಮಕ ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮವನ್ನು ವಂದನೀಯ ವಿಕ್ಟರ್ ವಿಜಯ್ ಲೋಬೊ ಉದ್ಘಾಟಿಸಿದರು. ಅವರು ಯುವಜನರಲ್ಲಿ ಸರಕಾರಿ ಸೇವೆಗಳ ಪ್ರಾಮುಖ್ಯತೆ ಮತ್ತು ಸಿದ್ಧತೆಯ ಅಗತ್ಯತೆ ಕುರಿತು ಮನದಟ್ಟಾಗುವಂತೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಎಪಿಸ್ಕೋಪಲ್ ಸಿಟಿ ವಲಯದ ಅಧ್ಯಕ್ಷ ಐಡ ಪುರ್ಟಾಡೊ, ಮಾಜಿ ಅಧ್ಯಕ್ಷ ಸ್ಟೀವನ್ ರೊಡ್ರಿಗಸ್, ಕಾರ್ಯದರ್ಶಿ ರೋಹನ್ ಸಿಕ್ವೇರಾ, ವಲಯ ಸಂಚಾಲಕ ದೀಪಕ್ ಡಿಸೋಜಾ, ಘಟಕದ ಅಧ್ಯಕ್ಷ ರೋವಿನ್ ಡಿ ಸೋಜಾ, ಕಾರ್ಯದರ್ಶಿ ಸವಿತಾ ವೇಗಸ್, ಹಾಗೂ ಸಂಚಾಲಕ ಕ್ಲೇವರ್ ಡಿ ಸೋಜಾ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀಮತಿ ಮ್ಯೂರಲ್ ಕುಟಿನ್ಹ ಅವರು ಸಿವಿಲ್ ಸರ್ವೀಸ್ಗಳಿಗೆ ತಯಾರಿ ಹೇಗೆ ಮಾಡಬೇಕು, ಯಾವ್ಯಾವ ಮಾರ್ಗಗಳಲ್ಲಿ ಮುನ್ನಡೆಯಬಹುದು ಎಂಬ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಶಿಬಿರದಲ್ಲಿ ಒಟ್ಟು 82 ವಿದ್ಯಾರ್ಥಿಗಳು ಹಾಗೂ 100ಕ್ಕೂ ಅಧಿಕ ಪೋಷಕರು ಭಾಗವಹಿಸಿದ್ದು, ಒಟ್ಟಾರೆ 182 ಜನರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮ ನಿರೂಪಣೆಯನ್ನು ಕ್ಲೇವರ್ ಡಿಸೋಜಾ ಮಾಡಿದ್ದಾರೆ. ಕೊನೆಗೆ ಘಟಕದ ಅಧ್ಯಕ್ಷ ರೋವಿನ್ ಡಿ ಸೋಜಾ ವಂದನಾರ್ಪಣೆ ಸಲ್ಲಿಸಿದರು.
