ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಶ್ರೀಕೃಷ್ಣ ಜೆ. ರಾವ್ ವಿರುದ್ಧ ದೂರು ನೀಡಿದ್ದ ಮಹಿಳೆಯೊಬ್ಬರು ಇದೀಗ ಪೊಲೀಸ್ ರಕ್ಷಣೆ ಕೋರಿದ್ದಾರೆ. ತನ್ನ ಮತ್ತು ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿ ಅವರು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಹಿಳೆ ಮತ್ತು ಶ್ರೀಕೃಷ್ಣ 9ನೇ ತರಗತಿಯಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿ ಆತ ಆಕೆಯನ್ನು ಗರ್ಭಿಣಿ ಮಾಡಿದ್ದ ಎನ್ನಲಾಗಿದೆ. ಆರಂಭದಲ್ಲಿ ಶ್ರೀಕೃಷ್ಣನ ಮನೆಯವರು ಮದುವೆ ಮಾಡಿಸುವುದಾಗಿ ಹೇಳಿ ನಂತರ ನಿರಾಕರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದರಿಂದಾಗಿ, ಜೂನ್ 24, 2025ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಶ್ರೀಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು.
ಆಗ ಶ್ರೀಕೃಷ್ಣನ ತಂದೆ ಜಗನ್ನಿವಾಸ ಅವರು, ಬೇಗ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಮಗುವಿನ ಜನನದ ವೇಳೆ ತಂದೆಯ ಹೆಸರಿನ ಜಾಗದಲ್ಲಿ ಶ್ರೀಕೃಷ್ಣನ ಹೆಸರನ್ನು ನಮೂದಿಸುವಂತೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ, ನಂತರ ಅವರು ತಮ್ಮ ಮಾತಿಗೆ ತಪ್ಪಿ, “ನನ್ನ ಮಗ ಈಗ ಮೇಜರ್ ಆಗಿದ್ದಾನೆ, ಅವನು ನಿನ್ನನ್ನು ಒಪ್ಪುತ್ತಿಲ್ಲ, ನಾನೂ ಕೂಡ ಒಪ್ಪುವುದಿಲ್ಲ” ಎಂದು ಹೇಳಿದ್ದಾರೆ.
ಇದರಿಂದ ಮತ್ತೊಮ್ಮೆ ಪೊಲೀಸ್ ಠಾಣೆಗೆ ಹೋದಾಗ, ಪೊಲೀಸರು ಎಫ್ಐಆರ್ ದಾಖಲಿಸಿ ಶ್ರೀಕೃಷ್ಣನನ್ನು ಬಂಧಿಸಿದ್ದರು. ನಂತರ ನ್ಯಾಯಾಲಯ ಆತನ ಜಾಮೀನನ್ನು ಸಹ ರದ್ದುಗೊಳಿಸಿತ್ತು. ಇದೀಗ ಶ್ರೀಕೃಷ್ಣನ ಕುಟುಂಬದಿಂದ ತನಗೆ ಮತ್ತು ಮಗುವಿಗೆ ಬೆದರಿಕೆ ಇದೆ ಎಂದು ಮಹಿಳೆ ಆರೋಪಿಸಿದ್ದು, ರಕ್ಷಣೆ ನೀಡುವಂತೆ ಪೊಲೀಸರನ್ನು ಕೋರಿದ್ದಾರೆ.
