ಮಂಗಳೂರು ; ಮದುವೆ ವಿಚಾರದಲ್ಲಿ ನಡೆದ ಕಲಹದಿಂದ ಯುವಕನೋರ್ವನು ತಂದೆ ಮಕ್ಕಳಿಗೆ ಚೂರಿಯಿಂದ ಇರಿದ ಪರಿಣಾಮ ತಂದೆ ಮೃತಪಟ್ಟು, ಮಕ್ಕಳಿಬ್ಬರು ಗಾಯಗೊಂಡ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಳಚಿಲ್ ಎಂಬಲ್ಲಿ ನಡೆದಿದೆ.ವಾಮಂಜೂರಿನ ನಿವಾಸಿ ಸುಲೇಮಾನ್ (50) ಮೃತ ವ್ಯಕ್ತಿ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಅವರ ಮಕ್ಕಳಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡಿದ್ದಾರೆ. ಮುಸ್ತಫಾ(30) ಬಂಧಿತ ಆರೋಪಿ.ಮೇ 22ರಂದು ರಾತ್ರಿ 9:30 ಸುಮಾರಿಗೆ ಘಟನೆ ನಡೆದಿದೆ.
ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಮೃತ ಸುಲೇಮಾನ್ 8 ತಿಂಗಳ ಹಿಂದೆ ತನ್ನ ಸಂಬಂಧಿಯಾದ ಆರೋಪಿ ಮುಸ್ತಫಾ(30)ನಿಗೆ ಯುವತಿಯೊಬ್ಬಳೊಂದಿಗೆ ವಿವಾಹ ಸಂಧಾನ ಮಾಡಿ ಮದುವೆಗೆ ಮಾಡಿದ್ದರು. ಬಳಿಕ ಅವರಿಬ್ಬರ ವೈವಾಹಿಕ ಜೀವನದ ಭಿನ್ನಾಭಿಪ್ರಾಯದಿಂದ, 2 ತಿಂಗಳ ಹಿಂದೆ ಮುಸ್ತಫಾನ ಮನೆಯನ್ನು ತೊರೆದು ತವರು ಮನೆ ಸೇರಿದ್ದಳು. ಇದು ಮುಸ್ತಫಾ ಮತ್ತು ಸುಲೇಮಾನ್ ನಡುವೆ ಗಲಾಟೆಗೆ ಕಾರಣವಾಗಿತ್ತು.ನಿನ್ನೆ ಸುಲೇಮಾನ್ ತಮ್ಮ ಮಕ್ಕಳಾದ ರಿಯಾಬ್ ಮತ್ತು ಸಿಯಾಬ್ ಅವರೊಂದಿಗೆ ವಳಚಿಲ್ನಲ್ಲಿರುವ ಮುಸ್ತಫಾ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮುಸ್ತಫಾ ಸುಲೇಮಾನ್ಗೆ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ ಕೊಲೆ ಮಾಡಿದ್ದಾನೆ.