ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಗಮ ಪ್ರದೇಶವಾದ ಕೆ.ಜಿ.ರೋಡ್ ಇಲ್ಲಿ ಸುಗಮ ಸಂಚಾರಕ್ಕಾಗಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದಿಂದ ಸಾರ್ವಜನಿಕರ ಪರವಾಗಿ ಮನವಿ…
ಉಡುಪಿ: ಕೆ.ಜಿ. ರೋಡ್ ಪ್ರದೇಶದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ಸಂಚಾರ ಹಾಗೂ ಅಪಘಾತಗಳ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಅಂಡರ್ ಪಾಸ್ ಮತ್ತು ಸರ್ವಿಸ್ ರೋಡ್ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಿದೆ.
ಈ ಕುರಿತು ಪ್ರಕಟಣೆ ನೀಡಿದ ಸಂಘಟನೆಯ ಪದಾಧಿಕಾರಿಗಳು, ಕೆ.ಜಿ. ರೋಡ್ ರಾಜ್ಯದ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳ ಸಂಚಾರ ನಡೆಯುತ್ತದೆ. ಆದರೆ ಮೂಲಭೂತ ರಸ್ತೆ ಸೌಕರ್ಯಗಳ ಕೊರತೆ, ಸಮರ್ಪಕ ಸರ್ವಿಸ್ ರೋಡ್ ವ್ಯವಸ್ಥೆಯ ಅಭಾವ ಮತ್ತು ಪಾದಚಾರಿಗಳಿಗೆ ಸುರಕ್ಷಿತವಾಗಿ ರಸ್ತೆ ದಾಟಲು ಅಗತ್ಯವಾದ ಅಂಡರ್ ಪಾಸ್ ಇಲ್ಲದಿರುವುದು ಸಾರ್ವಜನಿಕರಿಗೆ ಗಂಭೀರ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ ಪಾದಚಾರಿಗಳು ರಸ್ತೆ ದಾಟುವಾಗ ಜೀವಪಾಯದ ಪರಿಸ್ಥಿತಿ ಎದುರಿಸುತ್ತಿದ್ದು, ಇತ್ತೀಚಿನ ಅಪಘಾತಗಳ ಸರಣಿ ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಅಂಡರ್ ಪಾಸ್ ನಿರ್ಮಾಣ ಮಾಡಿಸಿ, ಪಾದಚಾರಿಗಳಿಗೆ ಸುರಕ್ಷಿತ ಮಾರ್ಗ ಕಲ್ಪಿಸುವುದು ಅತ್ಯಾವಶ್ಯಕ ಎಂದು ಸಂಘಟನೆ ಆಗ್ರಹಿಸಿದೆ.
ಇದಲ್ಲದೆ, ರಸ್ತೆ ಎರಡೂ ಬದಿಗಳಲ್ಲಿ ಸಮರ್ಪಕ ಸರ್ವಿಸ್ ರೋಡ್ ಅಭಿವೃದ್ಧಿಪಡಿಸಿದಲ್ಲಿ ಸ್ಥಳೀಯ ವಾಹನ ಸಂಚಾರ ಸುಗಮವಾಗುವುದರ ಜೊತೆಗೆ ಮುಖ್ಯ ರಸ್ತೆಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಕಾಮಗಾರಿಗಳ ವಿಳಂಬದಿಂದ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದ್ದು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕಾರ್ಯಾರಂಭ ಮಾಡಬೇಕೆಂದು ಮನವಿ ಮಾಡಲಾಗಿದೆ.
ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ಘಟಕವು ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಶೀಘ್ರದಲ್ಲೇ ಮನವಿ ಸಲ್ಲಿಸಲಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಯೋಜನೆಗಳನ್ನು ಆದ್ಯತೆಯಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದೆ. ಉಡುಪಿ ಜಿಲ್ಲಾದ್ಯಕ್ಷ ಫ್ರ್ಯಾಂಕಿ ಡಿಸೋಜಾ (ಕೊಳಲಗಿರಿ) ಪ್ರಧಾನ ಕಾರ್ಯದರ್ಶಿ: ಸುರೇಂದ್ರ ಪೂಜಾರಿ (ಹಾವಂಜೆ) ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷರು: ಜಯ ಪೂಜಾರಿ (ಲಕ್ಷ್ಮೀನಗರ) ಜಯಕರ ಆಚಾರ್, ರತ್ನಾಕರ್ ಮೊಗವೀರ ,ಜೆರಾಲ್ಡ್ ಅಲ್ಮೇಡಾ ,ಶಂಕರ್ ಕುಲಾಲ್ ಸುರೇಶ್ ಪೂಜಾರಿ ,ಸಾಧು ಪೂಜಾರಿ,ವಿಜಯ ಮಾಯಾಡಿ ಮತ್ತಿತರರು ಉಪಸ್ಥಿತರಿದ್ದರು.
