ಮಂಜೇಶ್ವರ: ಮಂಜೇಶ್ವರ ಸಮೀಪದ ತೂಮಿನಾಡು ಹಿಲ್ಟಾಪ್ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದ ಕುಟುಂಬ ಕಲಹದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಮಾರಕಾಸ್ತ್ರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು (ಫೆ.3) ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯಲ್ಲಿ ಸೋಮವಾರ ಸಂಜೆ ಶೇಕುಂಞಿಯವರ ಪುತ್ರಿ ಜುಮೈಲಾ (17) ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಪೊಲೀಸ್ ಮಾಹಿತಿ ಪ್ರಕಾರ, ಆಸ್ತಿ ವಿಚಾರವಾಗಿ ಉಮರ್ ಫಾರೂಕ್ ಹಾಗೂ ಆತನ ಪತ್ನಿಯ ತಂಗಿಯ ಪತಿ ಶೇಕುಂಞಿ ನಡುವೆ ಹಿಂದಿನಿಂದಲೂ ವೈಮನಸ್ಸು ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸೋಮವಾರ ಸಂಜೆ ಇಬ್ಬರ ನಡುವೆ ವಾಗ್ವಾದ ಉಗ್ರವಾಗಿ, ಉಮರ್ ಫಾರೂಕ್ ಮಾರಕಾಸ್ತ್ರದಿಂದ ಶೇಕುಂಞಿಯವರ ಮೇಲೆ ದಾಳಿ ನಡೆಸಿದ್ದಾನೆ. ದಾಳಿಯನ್ನು ತಡೆಯಲು ಮುಂದಾದ ಪುತ್ರಿ ಜುಮೈಲಾಳ ಮೇಲೆಯೂ ಇರಿತ ನಡೆದಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು.
ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಪ್ರಕರಣದ ಆರೋಪಿ ಉಮರ್ ಫಾರೂಕ್ನನ್ನು ಪೊಲೀಸರು ಸೋಮವಾರ ಸಂಜೆಯೇ ಬಂಧಿಸಿದ್ದು, ತನಿಖೆ ಮುಂದುವರಿದಿದೆ.
