ನವದೆಹಲಿ:
ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ನಿರ್ದೇಶಕರ ಅವಧಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊರಡಿಸಿರುವ ಇತ್ತೀಚಿನ ಆದೇಶ/ಸುತ್ತೋಲೆ ಹೊಸ ಚರ್ಚೆಗೆ ಕಾರಣವಾಗಿದೆ.
ಆಗಸ್ಟ್ 1ರಿಂದ ಜಾರಿಗೊಂಡಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ (ತಿದ್ದುಪಡಿ)–2025ರ ಸೆಕ್ಷನ್ 10ಎ(2)(ಜಿ) ಪ್ರಕಾರ, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ಗಳು (ಡಿಸಿಸಿ) ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಯಲ್ಲಿ ಯಾವುದೇ ವ್ಯಕ್ತಿ ಗರಿಷ್ಠ 10 ವರ್ಷಗಳ ಕಾಲ ಮಾತ್ರ ನಿರ್ದೇಶಕರಾಗಿ ಮುಂದುವರಿಯಲು ಅವಕಾಶ ಇರುತ್ತದೆ. ಈ ಅವಧಿ ಮೀರಿದರೆ ಅವರು ಸ್ವಯಂಚಾಲಿತವಾಗಿ ಅನರ್ಹರಾಗುತ್ತಾರೆ.
ಈ ಕಾನೂನು ತಿದ್ದುಪಡಿಯ ಅನುಷ್ಠಾನಕ್ಕಾಗಿ ಆರ್ಬಿಐ ಈಗಾಗಲೇ ದೇಶದ ಎಲ್ಲಾ ರಾಜ್ಯಗಳಂತೆ ಕರ್ನಾಟಕದ ಅಪೆಕ್ಸ್, ಡಿಸಿಸಿ ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್ಗಳಿಗೆ ಸುತ್ತೋಲೆ ಜಾರಿ ಮಾಡಿದ್ದು, 2025ರ ಆಗಸ್ಟ್ 1ರಿಂದ ತಿದ್ದುಪಡಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ.
ಈ ನಿರ್ದೇಶನದಿಂದ ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ಆಡಳಿತ ಸುಧಾರಣೆ ಹಾಗೂ ಹೊಸ ಮುಖಗಳಿಗೆ ಅವಕಾಶ ಸಿಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಮತ್ತೊಂದೆಡೆ ದೀರ್ಘಾವಧಿ ಸೇವೆ ಸಲ್ಲಿಸಿರುವ ನಿರ್ದೇಶಕರ ಭವಿಷ್ಯ ಕುರಿತಾಗಿ ಚರ್ಚೆಗೂ ದಾರಿ ಮಾಡಿಕೊಟ್ಟಿದೆ.

