ನವದೆಹಲಿ : ದೇಶದಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, “ದೇಶದ ಎಲ್ಲ ನಾಗರಿಕರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಭಾರತದ ಹೆಮ್ಮೆ ಮತ್ತು ವೈಭವದ ಪ್ರತೀಕವಾದ ಈ ರಾಷ್ಟ್ರೀಯ ಹಬ್ಬವು ನಿಮ್ಮ ಜೀವನಕ್ಕೆ ಹೊಸ ಶಕ್ತಿ, ಉತ್ಸಾಹ ತುಂಬಲಿ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಇನ್ನಷ್ಟು ಬಲಗೊಳ್ಳಲಿ” ಎಂದು ಹೇಳಿದ್ದಾರೆ.
ಇಂದು ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ (ಹಿಂದಿನ ರಾಜ್ಪಥ್) ಗಣರಾಜ್ಯೋತ್ಸವದ ಮುಖ್ಯ ಸಮಾರಂಭ ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವೀರ ಸೈನಿಕರಿಗೆ ಪುಷ್ಪಾಂಜಲಿ ಸಲ್ಲಿಸಲಿದ್ದಾರೆ.
ಪ್ರತಿ ವರ್ಷ ಗಣರಾಜ್ಯೋತ್ಸವಕ್ಕೆ ಒಬ್ಬ ವಿದೇಶಿ ಗಣ್ಯರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಪರಂಪರೆಯಂತೆ, ಈ ಬಾರಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅವರಿಗೆ ಪದ್ಧತಿಯಂತೆ 21 ಗನ್ ಸೆಲ್ಯೂಟ್ ಹಾಗೂ ಗಾರ್ಡ್ ಆಫ್ ಆನರ್ ಮೂಲಕ ಗೌರವ ಸಲ್ಲಿಸಲಾಗುವುದು.
ಮೂರು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಈ ಗಣ್ಯರ ಆಗಮನ ಕೇವಲ ರಾಜತಾಂತ್ರಿಕ ಮಹತ್ವಕ್ಕೆ ಸೀಮಿತವಾಗದೆ, ಮುಂದಿನ ದಿನ ನಡೆಯಲಿರುವ ಮಹತ್ವದ ವ್ಯಾಪಾರ ಒಪ್ಪಂದಗಳ ಕಾರಣದಿಂದ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿದೆ.
ವಂದೇ ಮಾತರಂ ಪರಿಕಲ್ಪನೆ ಈ ವರ್ಷದ ಗಣರಾಜ್ಯೋತ್ಸವದ ವಿಶೇಷ ಆಕರ್ಷಣೆಯಾಗಿದ್ದು, ರಾಷ್ಟ್ರಗೀತೆಯಾದ ವಂದೇ ಮಾತರಂ 150 ವರ್ಷ ಪೂರೈಸಿರುವ ಹಿನ್ನೆಲೆ ಈ ಥೀಮ್ನಲ್ಲಿ ಆಚರಣೆ ನಡೆಯುತ್ತಿದೆ. ಬೆಳಿಗ್ಗೆ 10.30ಕ್ಕೆ ಪಥಸಂಚಲನ ಆರಂಭವಾಗಲಿದ್ದು, ಸುಮಾರು 90 ನಿಮಿಷಗಳ ಕಾಲ ಭವ್ಯ ಪರೇಡ್ ನಡೆಯಲಿದೆ.
ಪರೇಡ್ನಲ್ಲಿ
• 18 ಕವಾಯತುಗಳ ಪ್ರದರ್ಶನ
• 13 ಮಿಲಿಟರಿ ಬ್ಯಾಂಡ್ಗಳು
• 2,500 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
• 10,000ಕ್ಕೂ ಹೆಚ್ಚು ಅತಿಥಿಗಳ ಭಾಗವಹಣೆ
• ಮೊದಲ ಬಾರಿ ಪ್ರಾಣಿಗಳ ಪಡೆಯೂ ಸೇರ್ಪಡೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜ ಅನಾವರಣ ಮಾಡುವ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಫ್ಲೈಟ್ ಲೆಫ್ಟಿನೆಂಟ್ ಅಕ್ಷಿತಾ ಧನಕರ ಅವರೂ ಜೊತೆಯಾಗಿರಲಿದ್ದಾರೆ.
ಕರ್ತವ್ಯ ಪಥದಲ್ಲಿ ವಂದೇ ಮಾತರಂ ಹಾಗೂ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಬಿಂಬಿಸುವ ಟ್ಯಾಬ್ಲೊಗಳು ಸಾಗಲಿದ್ದು, 17 ರಾಜ್ಯಗಳು ಮತ್ತು 13 ಕೇಂದ್ರ ಸಚಿವಾಲಯಗಳು ತಮ್ಮ ಸಾಧನೆಗಳನ್ನು ಪ್ರದರ್ಶಿಸಲಿವೆ. ಆಪರೇಷನ್ ಸಿಂದೂರ ನಂತರ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವವಾಗಿರುವುದರಿಂದ, ಈ ಬಾರಿ ಸೇನೆಯಿಂದ “ಆಪರೇಷನ್ ಸಿಂದೂರ: ವಿಕ್ಟರಿ ಥ್ರೂ ಜಾಯಿಂಟ್ನೆಸ್” ಶೀರ್ಷಿಕೆಯ ವಿಶೇಷ ಟ್ಯಾಬ್ಲೊ ಪ್ರದರ್ಶನ ಇರಲಿದೆ.
ಕರ್ತವ್ಯ ಪಥದ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಭಾಗಿಯಾಗದಿದ್ದರೂ, ಕೆಂಪು ಕೋಟೆಯಲ್ಲಿ ನಡೆಯುವ ಭಾರತ ಪರ್ವದಲ್ಲಿ “ಸಿರಿಧಾನ್ಯದಿಂದ ಮೈಕ್ರೋಚಿಪ್ವರೆಗೆ” ಎಂಬ ಸ್ತಬ್ಧಚಿತ್ರದ ಮೂಲಕ ಕರ್ನಾಟಕದ ಕೃಷಿಯಿಂದ ಕೈಗಾರಿಕೆ ಹಾಗೂ ಆಧುನಿಕ ತಂತ್ರಜ್ಞಾನವರೆಗಿನ ಪ್ರಗತಿಪಥವನ್ನು ಪ್ರದರ್ಶಿಸಲಾಗುವುದು.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸೇನೆ ಹಾಗೂ ಭದ್ರತಾ ಪಡೆಗಳನ್ನು ವ್ಯಾಪಕವಾಗಿ ನಿಯೋಜಿಸಲಾಗಿದ್ದು, ಡ್ರೋನ್ ಹಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಕಟ್ಟಡಗಳ ಮೇಲ್ಭಾಗದಲ್ಲಿ ಶಾರ್ಪ್ಶೂಟರ್ಗಳು, ಎಲ್ಲೆಡೆ ಸಿಸಿಟಿವಿ ನಿಗಾವಹಿಸಲಾಗಿದೆ.
ಸಮಾರಂಭಕ್ಕೆ ಬರುವವರಿಗೆ ಆಹಾರ ಪದಾರ್ಥಗಳು, ನೀರಿನ ಬಾಟಲ್, ಗನ್, ಚಾಕು, ಚೂಪಾದ ವಸ್ತುಗಳು, ಕೊಡೆ, ಕಪ್ಪು ಬಟ್ಟೆ, ಕ್ಯಾಮೆರಾ, ರೇಡಿಯೋ, ಬ್ಯಾಗ್, ಸ್ಯೂಟ್ಕೇಸ್, ಸಿಗರೇಟ್, ಬೀಡಿ, ಬೆಂಕಿಪೊಟ್ಟಣ ಹಾಗೂ ಅಗ್ನಿಕಾರಕ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
