ಉಡುಪಿ: ಪೊಲೀಸರು ಆರೋಪಿಯನ್ನು ಹುಡುಕುವ ನೆಪದಲ್ಲಿ ಇತರರೊಂದಿಗೆ ಸೇರಿಕೊಂಡು ಕುಮಾರಿ ಅಕ್ಷತಾ ಪೂಜಾರಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ, ಬಳಿಕ ನಡೆದ ಪೊಲೀಸ್ ಕ್ರಮ ಸಂಪೂರ್ಣವಾಗಿ ಖಂಡನೀಯವಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆರೋಪಿಸಿದೆ.
ಘಟನೆಯ ವೇಳೆ ಹಲ್ಲೆಗೆ ಒಳಗಾದ ಕುಮಾರಿ ಅಕ್ಷತಾ ಪೂಜಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯ ಕುರಿತು ಹೇಳಿಕೆ ನೀಡಿದರೂ, ಠಾಣಾಧಿಕಾರಿಗಳು ಆಕೆಯ ದೂರನ್ನು ದಾಖಲಿಸದೆ, ಆರೋಪಿಗಳಾದ ಪೊಲೀಸರನ್ನು ರಕ್ಷಿಸುವ ಉದ್ದೇಶದಿಂದ ಅಕ್ಷತಾ ಪೂಜಾರಿ ಹಾಗೂ ಆಕೆಯ ತಾಯಿಯ ಮೇಲೆ “ಕರ್ತವ್ಯಕ್ಕೆ ಅಡ್ಡಿ” ಎಂಬ ಸುಳ್ಳು ಪ್ರಕರಣ ದಾಖಲಿಸಿರುವುದು ಗಂಭೀರ ಅನ್ಯಾಯವಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಮುಖಂಡ ಪ್ರವೀಣ್ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಕಾನೂನಿನ ರಕ್ಷಕರಾಗಿರಬೇಕಾದರೆ, ಇಂತಹ ಅಕ್ರಮ ಪ್ರವೇಶ, ಹಲ್ಲೆ ಹಾಗೂ ನಂತರ ದೂರು ನೀಡಿದ ಮಹಿಳೆಯ ಮೇಲೆಯೇ ಪ್ರತಿಕಾರವಾಗಿ ಸುಳ್ಳು ಪ್ರಕರಣ ದಾಖಲಿಸುವುದು ಕಾನೂನು ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಂದಿಸುವ ಕಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ನ್ಯಾಯ ದೊರಕಬೇಕಾದರೆ, ಎಲ್ಲಾ ಸಂಘಟನೆಗಳು, ಸಮಾಜಮುಖಿ ಸಂಸ್ಥೆಗಳು ಹಾಗೂ ಮಹಿಳಾ ಸಂಘಟನೆಗಳು ಒಂದಾಗಿ ಹೋರಾಟ ನಡೆಸಬೇಕಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅಧಿಕಾರ ದುರುಪಯೋಗವನ್ನು ತಡೆಹಿಡಿಯಲು ಸರ್ಕಾರ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳು ತಕ್ಷಣ ಹಸ್ತಕ್ಷೇಪ ಮಾಡಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಆಗ್ರಹಿಸಿದೆ.
ಅನ್ಯಾಯಕ್ಕೊಳಗಾದ ಹೆಣ್ಣುಮಗಳಿಗೆ ನ್ಯಾಯ ದೊರಕಿಸುವ ತನಕ ಹೋರಾಟ ಮುಂದುವರಿಸುವುದಾಗಿ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಪ್ರವೀಣ್ ಪೂಜಾರಿ ತಿಳಿಸಿದ್ದಾರೆ.

