ಉಡುಪಿ: ಝೊಮ್ಯಾಟೊ ಫುಡ್ ಡೆಲಿವರಿ ಬಾಗ್ ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಉಡುಪಿ ಸೆನ್ ಅಪರಾಧ ಠಾಣೆ ಪೊಲೀಸರು ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಬಂಧಿಸಿದ್ದಾರೆ. ರವಿ ಶಂಕರ್, ಅಂಜಲ್ ಬೈಜು ಹಾಗೂ ದೇವಿಪ್ರಸಾದ್ ಬಂಧಿತ ಆರೋಪಿಗಳು.ರವಿಶಂಕರ್ ಕೇರಳದ ಪಾಲಕ್ಕಾಡ್ ನಿಂದ ಗಾಂಜಾವನ್ನು ರೈಲಿನ ಮೂಲಕ ಉಡುಪಿಗೆ ತಂದು ಉಡುಪಿಯಲ್ಲಿ ಗಾಂಜಾ ಸೇವಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ಕೊಡುತ್ತಿದ್ದಾನೆಂಬ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಈತ ಮಣಿಪಾಲ ಸಮೀಪದ ಮಂಚಿ ಗ್ರಾಮದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ಕೆಲವು ಸ್ನೇಹಿತರೊಂದಿಗೆ ಉಳಿದುಕೊಂಡಿದ್ದನು. ಇಂದ್ರಾಳಿಯಿಂದ ಮಂಚಿಗೆ ಹೋಗುವ ರಸ್ತೆಯಲ್ಲಿ ಈ ಮೂವರು ಆರೋಪಿಗಳು ಝೊಮ್ಯಾಟೊ ಫುಡ್ ಡೆಲಿವರಿ ಬಾಗ್ ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಗಿರಾಕಿ ಹಾಗೂ ಪೆಡ್ಲರ್ ಗಳಿಗಾಗಿ ಕಾಯುತ್ತಿದ್ದರು. ಈ ಕುರಿತ ಖಚಿತ ಮಾಹಿತಿಯಂತೆ ಪತ್ರಾಂಕಿತ ಅಧಿಕಾರಿ ಪ್ರೊ. ಪ್ರಕಾಶ್ ರಾವ್ ಹಾಗೂ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ .ಆರೋಪಿಗಳಿಂದ ಸುಮಾರು 1 ಕೆಜಿ 277 ಗ್ರಾಂ ತೂಕದ ಗಾಂಜಾ, 2 ಬೈಕ್ , ಝೊಮೆಟೊ ಫುಡ್ ಡೆಲಿವರಿ ಬಾಗ್, 4 ಮೊಬೈಲ್ ಗಳನ್ನು ಮತ್ತು ಮೂವತ್ತು ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 1,37,000 ರೂ ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
