ಆಡು ಮುಟ್ಟದ ಸೊಪ್ಪಿಲ್ಲ, ಸಿನಿಮಾ ಚಿತ್ರೀಕರಿಸದ ಜಾಗವಿಲ್ಲ ಎಂದು ಹೇಳುತ್ತಿದ್ದರು. ಆದರೆ ಆ ಒಂದು ಜಾಗದಲ್ಲಿ ಸಿನಿಮಾ ಚಿತ್ರೀಕರಿಸಲು ಸಾಧ್ಯವೆ ಇಲ್ಲ ಎಂದು ಹೇಳಲಾಗುತ್ತಿತ್ತು. ಅದುವೆ ಬಾಹ್ಯಾಕಾಶ. ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಿಸಲು ನಿಜಕ್ಕೂ ಸಾಧ್ಯನಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಆದರೆ ಅಮೆರಿಕನರನ್ನು ಹಿಂದಿಕ್ಕಿ ಅಂತರಿಕ್ಷದಲ್ಲಿ ಮೊದಲ ಬಾರಿಗೆ ಚಿತ್ರೀಕರಣ ಮಾಡಿ ರಷ್ಯಾ ಐತಿಹಾಸಿಕ ದಾಖಲೆ ಬರೆದಿದೆ. 12 ದಿನ ಅಂತರಿಕ್ಷದಲ್ಲಿ ಸಿನಿಮಾದ ಕೆಲ ದೃಶ್ಯಗಳನ್ನ ಚಿತ್ರೀಕರಿಸಿ, ಸಿನಿಮಾ ತಂಡ ಭೂಮಿಗೆ ವಾಪಸ್ ಬಂದಿದ್ದಾರೆ. `ದಿ ಚಾಲೆಂಜ್’ ಬಾಹ್ಯಾಕಾಶ ಕೇಂದ್ರದದಲ್ಲಿ ಚಿತ್ರೀಕರಿಸಿದ ವಿಶ್ವದ ಮೊದಲ ಸಿನಿಮಾ ಎನಿಸಿಕೊಂಡಿದೆ. ಟೈಟಲ್ಗೆ ತಕ್ಕಂತೆ ಶೂಟಿಂಗ್ ಅನ್ನು ಚಾಲೆಂಜಿಗ್ ಆಗಿ ತೆಗೆದುಕೊಂಡ ಸಿನಿಮಾ ತಂಡ, ಬಾಹ್ಯಾಕಾಶದಲ್ಲಿ ಚಿತ್ರೀಕರಣವನ್ನು ಯಶಸ್ವಿಗೊಳಿಸಿ ನಿನ್ನೆ ಭೂಮಿಗೆ ವಾಪಸ್ಸಾಗಿದ್ದಾರೆ.
ಹಾಲಿವುಡ್ ಖ್ಯಾತ ನಟ ಟಾಮ್ ಕ್ರೂಸ್ ಅವರ ಅಭಿನಯದ ಸಿನಿಮಾವೊಂದು ಬಾಹ್ಯಾಕಾಶದಲ್ಲಿ ಶೂಟಿಂಗ್ ಮಾಡುವುದಾಗಿ ಮೊದಲು ಘೋಷಿಸಿತ್ತು. ಆದರೆ ‘ದಿ ಚಾಲೆಂಜ್’ ಚಿತ್ರತಂಡ, ಅವರಿಗೂ ಮೊದಲೇ ಅಂತರಿಕ್ಷದಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಕಳೆದ ವರ್ಷ ನಾಸಾ ಹಾಗೂ ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಸಹಯೋಗದಲ್ಲಿ ಬಾಲಿವುಡ್ ನಟ ಟಾಮ್ ಕ್ರೂಸ್ ತಮ್ಮ ‘ಮಿಷನ್ ಇಂಪಾಸಿಬಲ್’ ಚಿತ್ರವನ್ನು ಬಾಹ್ಯಾಕಾಶದಲ್ಲಿ ಚಿತ್ರಿಸಲು ನಿರ್ಧರಿಸಿತ್ತು. ಈ ಮೂಲಕ ಹೊಸ ದಾಖಲೆ ನಿರ್ಮಿಸಲು ನಿರ್ಧರಿಸಿತ್ತು. ಆದರೆ ದಿ ಚಾಲೆಂಜ್ ಚಿತ್ರತಂಡ ಅದಕ್ಕೂ ಮೊದಲೇ ಶೂಟಿಂಗ್ ನಡೆಸಿ ಹೊಸ ದಾಖಲೆಯನ್ನ ತನ್ನ ಹೆಸರಿನಲ್ಲಿ ಸ್ಥಾಪಿಸಿಕೊಂಡಿದೆ.
1960ರಲ್ಲೂ ಮೇಲುಗೈ ಸಾಧಿಸಿದ್ದ ರಷ್ಯಾ
ಈ ಹಿಂದೆಯೂ ಅಮೆರಿಕರನ್ನೂ ಹಿಂದಿಕ್ಕಿದ್ದ ರಷ್ಯಾ. 1960 ದಶಕದಲ್ಲಿ ರಷ್ಯಾ ದೇಶ ಹಾಗೂ ಅಮೆರಿಕ ದೇಶದ ನಡುವೆ ಅಂತರಿಕ್ಷ ಯಾನಕ್ಕೆ ಸಂಬಂಧಿಸಿದಂತೆ ಸ್ಪರ್ಧೆ ಏರ್ಪಟ್ಟಿತ್ತು. ಆಗ ರಷ್ಯನ್ನರು ಮೊದಲು ಅಂತರಿಕ್ಷಯಾನ ಕೈಗೊಂಡು ಮೇಲುಗೈ ಸಾಧಿಸಿದ್ದರು. ಇದೀಗ ಮತ್ತೆ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣ ನಡೆಸಿ ದಾಖಲೆ ನಿರ್ಮಿಸಿದೆ. ಈ ಬಗ್ಗೆ ರಷ್ಯನ್ನರು ಸಂತಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 5 ರಂದು ಬಾಹ್ಯಾಕಾಶಕ್ಕೆ ತೆರಳಿದ್ದ ಚಿತ್ರತಂಡ
ರಷ್ಯಾ ದೇಶದ ದಿ ಚಾಲೆಂಜ್ ಚಿತ್ರತಂಡ ಅಕ್ಟೋಬರ್ 5ರಂದು ಬಾಹ್ಯಾಕಾಶಕ್ಕೆ ತೆರಳಿತ್ತು. ಒಟ್ಟು 12 ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಚಿತ್ರತಂಡ ನಿನ್ನೆ ಕಜಕಿಸ್ತಾನದ ನಿಗದಿತ ಸ್ಥಳಕ್ಕೆ ಬಂದಿಳಿಯಿತು. ಸೂಯೆಜ್ ಕ್ಯಾಪ್ಯುಲ್ನಲ್ಲಿ ಮೂರುವರೆ ಗಂಟೆಗಳ ಪ್ರಯಾಣದ ಬಳಿಕ ಕಜಕಿಸ್ಥಾನದಲ್ಲಿ ಲ್ಯಾಂಡ್ ಆಗಿದ್ದಾರೆ. ಇನ್ನೂ ಚಿತ್ರತಂಡ ಜೊತೆಗೆ ರಷ್ಯಾದ ಗಗನಯಾತ್ರಿ ಒಲೆಗ್ ಕೂಡ ಬಾಹ್ಯಾಕಾಶದಿಂದ ಭೂಮಿಗೆ ಬಂದಿಳಿದರು.
ಸಿನಿಮಾದ ಯಾವ ದೃಶ್ಯ ಬಾಹ್ಯಾಕಾಶದಲ್ಲಿ ಚಿತ್ರೀಕರಣ?
ದಿ ಚಾಲೆಂಜ್ ಚಿತ್ರದ ಕಥೆಯಲ್ಲಿ ಬಾಹ್ಯಾಕಾಶ ಯಾನಿಯೊಬ್ಬರಿಗೆ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತೆ. ಹೀಗಿರುವಾಗ ಭೂಮಿಯಿಂದ ವೈದ್ಯೆಯೊಬ್ಬರು ಬಾಹ್ಯಾಕಾಶಕ್ಕೆ ತೆರಳಿ ಚಿಕಿತ್ಸೆ ನೀಡಿ ಮರಳಿ ಭೂಮಿಗೆ ವಾಪಾಸ್ಸಾಗಲಿದ್ದಾರೆ. ಈ ದೃಶ್ಯ ಶೂಟಿಂಗ್ಗಾಗಿ ಚಿತ್ರದ ನಿರ್ದೇಶಕ ಶಿಪೆನ್ಕೋ ಮತ್ತು ನಟಿ ಯೂಲಿಯಾ ಬಾಹ್ಯಾಕಾಶಕ್ಕೆ ತೆರಳಿದ್ದರು. ದಿ ಚಾಲೆಂಜ್ ಸಿನಿಮಾದಲ್ಲಿ ಅಂತರಿಕ್ಷದಲ್ಲಿ ಗಾಯಗೊಳ್ಳುವ ಯಾನಿ ಪಾತ್ರವನ್ನು ಸ್ವತಃ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲೇ ಇದ್ದ ರಷ್ಯಾದ ಗಗನಯಾತ್ರಿ ಒಲೆಗ್ ನೋವಿಟ್ಸ್ಕೈ ಮಾಡಿದ್ದಾರೆ. ಇನ್ನೂ ಬಾಹ್ಯಾಕಾಶಕ್ಕೆ ತೆರಳುವ ಮುನ್ನ ಚಿತ್ರತಂಡ ಹಲವು ತಿಂಗಳ ಕಾಲ ಸಿದ್ಧತೆಯನ್ನ ಮಾಡಿಕೊಂಡಿತ್ತು. ಸಿನಿಮಾದ ಕೆಲ ದೃಶ್ಯಗಳನ್ನ ಇಲ್ಲಿ ಚಿತ್ರೀಕರಿಸಿ ಬಳಿಕ ಸಿನಿಮಾವನ್ನು ಬಿಡುಗಡೆಗೊಳಿಸುವ ಯೋಜನೆಯನ್ನ ಚಿತ್ರತಂಡ ಮಾಡಿಕೊಂಡಿದೆ.
