ಮೈಸೂರು: ಸಮಯ ಸಾಯಂಕಾಲ 5 ಗಂಟೆಯಾಗುತ್ತಿದ್ದಂತೆಯೇ 70 ವರ್ಷ ದಾಟಿದ ಇಳಿವಯಸ್ಸಿನ ವ್ಯಕ್ತಿ ಸಮವಸ್ತ್ರ ಧರಿಸಿ ಟ್ರಾಫಿಕ್ ಪೊಲೀಸರಂತೆ ಮೈಸೂರಿನ ಜನದಟ್ಟಣೆ, ವಾಹನದಟ್ಟಣೆಯ ಕೌಟಿಲ್ಯ ಸರ್ಕಲ್ ನಲ್ಲಿ ನಿಂತು ವಾಹನದಲ್ಲಿ ಚಲಿಸುವವರಿಗೆ ಮಾರ್ಗದರ್ಶನ ಮಾಡುತ್ತಿರುತ್ತಾರೆ, ಟ್ರಾಫಿಕ್ ಪೊಲೀಸರಂತೆಯೇ ಜನರಿಗೆ, ವಾಹನ ಚಾಲಕರಿಗೆ ಸೂಚನೆ ನೀಡುತ್ತಾ, ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೂ ಎಚ್ಚರಿಗೆ ನೀಡುತ್ತಿರುತ್ತಾರೆ.
77 ವರ್ಷದ ಎ.ಮಹೇಶ್ವರ ಎಂಬ ಈ ವಯೋವೃದ್ಧ ಕಳೆದ 3 ದಶಕಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹೇಶ್ವರ ಅವರು ಹಿರಿಯ ಟ್ರಾಫಿಕ್ ವಾರ್ಡನ್ ಆಗಿದ್ದು ಇವರು ಪ್ರತಿನಿತ್ಯ ಪ್ರಮುಖ ಹೊತ್ತಿನಲ್ಲಿ ಮೈಸೂರು ನಗರದ ಹಲವು ಜಂಕ್ಷನ್ ಮತ್ತು ಸರ್ಕಲ್ ನಲ್ಲಿ ಸಂಚಾರ ಪೊಲೀಸರು ಇಲ್ಲದಿರುವ ಕಡೆ ಜನರಿಗೆ ಸಂಚಾರ ನಿಯಮವನ್ನು ಸೂಚಿಸುತ್ತಿರುತ್ತಾರೆ.
ಕಳೆದ ಕೆಲ ವರ್ಷಗಳಿಂದ ಇವರು ಕೌಟಿಲ್ಯ ಸರ್ಕಲ್ ನ್ನು ಆಯ್ಕೆಮಾಡಿಕೊಂಡಿದ್ದು ಸಾಯಂಕಾಲ 5 ಗಂಟೆಗೆ ಬಂದು 7 ಗಂಟೆಯವರೆಗೆ ಇರುತ್ತಾರೆ. ಈ ವಯಸ್ಸಿನಲ್ಲಿ ಕೂಡ ಇವರ ನಿಸ್ವಾರ್ಥ ಸೇವೆ ಕಂಡು ಹಿರಿಯ ಸಂಚಾರಿ ಪೊಲೀಸರು ಕೂಡ ಇವರ ಮುಂದೆ ಬಾಗಿ ನಿಲ್ಲುವಂತೆ ಮಾಡಿದೆ. ಅವರ ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಕೂಡ ಮೆಚ್ಚುಗೆ ಸೂಚಿಸುತ್ತಾರೆ.
ಮಹೇಶ್ವರ ಅವರು ತಮ್ಮ ಯೌವ್ವನದಲ್ಲಿ ಪತ್ರಿಕಾ ಏಜೆಂಟ್ ಆಗಿ ನಂತರ ವಿಮಾ ಸಲಹೆಗಾರರಾಗಿ ಕೆಲಸ ಮಾಡಿದ್ದರಂತೆ. ಸಾಯಂಕಾಲ ಹೊತ್ತಿನಲ್ಲಿ ಟ್ರಾಫಿಕ್ ನಿಯಂತ್ರಕರಾಗಿ ದುಡಿದುಕೊಂಡು ಬರುತ್ತಿದ್ದರು. ಕೆಲಸಕ್ಕೆ ವಿರಾಮವಿಲ್ಲದೆ ದುಡಿಯುತ್ತಾರೆ. ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಕೂಡ ಬೆಳಗ್ಗೆ ಮತ್ತು ಸಾಯಂಕಾಲ ಕೆಲಸ ಮಾಡುತ್ತಿದ್ದರಂತೆ.
1980ರ ದಶಕದಲ್ಲಿ ಅಂದಿನ ಎಸ್ಪಿ ರಾಮಮೂರ್ತಿಯವರು ಮೈಸೂರಿನಲ್ಲಿ ದಸರಾ ಸಮಯದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ತಮಗೆ ಸಹಾಯಕ್ಕೆ ಸಂಚಾರ ನಿಯಂತ್ರಿಸಲು ಇಚ್ಛೆಯಿರುವ ವ್ಯಕ್ತಿಗಳನ್ನು ತಮ್ಮೊಂದಿಗೆ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದರಂತೆ. ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂದು ಸಂಚಾರ ನಿಯಂತ್ರಕನಾಗಿ ಕೆಲಸ ಮಾಡಿಕೊಂಡು ಬಂದೆ. ನಂತರ ವಿಶೇಷ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಅಂದಿನಿಂದ, ವಿರಾಮವಿಲ್ಲದೆ ನಾನು ಅವರ ಪೊಲೀಸ್ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಿ ಪೊಲೀಸ್ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಬಂದ್, ದಸರಾ ಅಥವಾ ಇತರ ಪ್ರಮುಖ ಸಂದರ್ಭಗಳಲ್ಲಿ ಹೆಚ್ಚು ಗಂಟೆಗಳ ಕಾಲ ಕರ್ತವ್ಯ ಮಾಡುತ್ತೇನೆ ಎನ್ನುತ್ತಾರೆ ಮಹೇಶ್ವರ.
ಟ್ರಾಫಿಕ್ ವಾರ್ಡನ್ ಕೆಲಸ ಜಾರಿಗೆ ಬಂದಾಗ ಅದಕ್ಕೆ ಸೇರಿಕೊಂಡು ಅನೇಕ ಯುವಕರಿಗೆ ಮಾದರಿಯಾದೆ. ನನ್ನ ಸೇವೆ ಪರಿಗಣಿಸಿ ಪೊಲೀಸ್ ಇಲಾಖೆ ಹಲವು ಸಂದರ್ಭಗಳಲ್ಲಿ ಸನ್ಮಾನಿಸಿದೆ.ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ, ಹಲವು ವೇದಿಕೆಗಳು, ಎನ್ ಜಿಒಗಳು ನನ್ನನ್ನು ಸನ್ಮಾನಿಸಿವೆ ಎಂದು ಮಹೇಶ್ವರ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಮಹೇಶ್ವರ ಅವರ ಜೊತೆ ಟ್ರಾಫಿಕ್ ವಾರ್ಡನ್ ಆಗಿ ಕೆಲಸಕ್ಕೆ ಸೇರಿಕೊಂಡ ಹಲವರು ಆರೋಗ್ಯ ಸಮಸ್ಯೆ ಎಂದು ಹೇಳಿಕೊಂಡು ಕೆಲಸ ತೊರೆದಿದ್ದಾರೆ. ಜನರು ಕಟ್ಟುನಿಟ್ಟಾಗಿ ಸಂಚಾರ ನಿಯಮವನ್ನು ಪಾಲಿಸಬೇಕು, ಆಗ ವ್ಯವಸ್ಥೆ ಸಂಪೂರ್ಣ ಬದಲಾಗುತ್ತದೆ ಎನ್ನುತ್ತಾರೆ ಮಹೇಶ್ವರ.