ಮೈಸೂರು : ಪಾಶ್ಚಾತ್ಯ ದೇಶ ಹಾಗೂ ಭಾರತದ ಕೆಲವೇ ರಾಜ್ಯಗಳಲ್ಲಿ ಕಂಡು ಬರುತ್ತಿದ್ದ ‘ರೋಬೋ’ ಇದೀಗ ಅರಮನೆ ನಗರಿ ಮೈಸೂರಿಗೂ ಕಾಲಿಟ್ಟಿದ್ದು, ಹೋಟೆಲ್ನಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ದಿಲ್ಲಿಯಿಂದ ಆಗಮಿಸಿರುವ ಈ ‘ರೋಬೋ ಸುಂದರಿ’ ಸದ್ಯ ಸಾಂಸ್ಕೃತಿಕ ನಗರಿ ಮೈಸೂರಿನ ಹಾರ್ಡಿಂಜ್ ವೃತ್ತದ ಬಳಿಯ ಸಿದ್ಧಾರ್ಥ ಹೋಟೆಲ್ನಲ್ಲಿ ಗ್ರಾಹಕರಿಗೆ ಸೇವೆ ಕಲ್ಪಿಸುತ್ತಿದ್ದು, ಎಲ್ಲರ ಆಕರ್ಷಷಣೆ ಕೇಂದ್ರ ಬಿಂದುವಾಗಿದ್ದಾಳೆ. ಅಂದಹಾಗೆ ಇದರ ಬೆಲೆ 2.50 ಲಕ್ಷ ರೂ. ಇಷ್ಟು ದಿನ ಈ ರೋಬೋ ಸುಂದರಿ ಚೆನ್ನೈ, ಹೈದರಾಬಾದ್, ಶಿವಮೊಗ್ಗದಲ್ಲಿ ಮಾತ್ರ ಕಾಣಸಿಗುತ್ತಿತ್ತು. ಆದರೆ, ಇದೀಗ ಮೈಸೂರಿನಲ್ಲೂ ಈ ವಿನೂತನ ತಂತ್ರಜ್ಞಾನ ರೋಬೋ ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ.

ಸೇವೆ ಹೇಗೆ?
ಟೇಬಲ್ನಲ್ಲಿ ಗ್ರಾಹಕರು ಕುಳಿತ ತಕ್ಷಣ ನೀರಿನ ಲೋಟಗಳೊಂದಿಗೆ ರೋಬೋ ಆಗಮಿಸುತ್ತದೆ. ಮೆನು ಬಗ್ಗೆ ಕೇಳಿದರೆ ರೆಸ್ಟೋರೆಂಟ್ನ ವಿಶೇಷ ತಿಂಡಿ ಸೇರಿದಂತೆ ಲಭ್ಯವಿರುವ ಎಲ್ಲಾ ತಿಂಡಿ- ತಿನಿಸಿನ ಹೆಸರು ಹೇಳುತ್ತದೆ. ಗ್ರಾಹಕರು ಆರ್ಡರ್ ಮಾಡಿದ ತಿಂಡಿಯನ್ನು ಸಿದ್ಧಗೊಳಿಸಿ, ರೋಬೋಟ್ ಕೈಯಲ್ಲಿ ಅಳವಡಿಸಲಾಗಿರುವ ತಟ್ಟೆ (ಟ್ರೇ) ಮೇಲೆ ಇಟ್ಟು, ಟೇಬಲ್ ಸಂಖ್ಯೆಯನ್ನು ತಿಳಿಸಿದರೆ ಕಾಂತೀಯ ಪಟ್ಟಿ ಮೇಲೆ ಸಾಗಿ ನಿರ್ದಿಷ್ಟ ಟೇಬಲ್ ಬಳಿ ನಿಂತುಕೊಳ್ಳುತ್ತದೆ. ಗ್ರಾಹಕರು ಟ್ರೇ ಮೇಲಿರುವ ತಿಂಡಿಯನ್ನು ತೆಗೆದುಕೊಂಡ ನಂತರ ರೋಬೋ ನಿಗದಿತ ಸ್ಥಳಕ್ಕೆ ವಾಪಸಾಗುತ್ತದೆ.
ಕಾರ್ಯಾಚರಣೆ ಹೇಗೆ?
ಇದು ಬ್ಯಾಟರಿ ಚಾಲಿತ ರೋಬೋಟ್ ಆಗಿದ್ದು, 4 ಗಂಟೆ ಬ್ಯಾಟರಿ ಚಾರ್ಜ್ ಮಾಡಿದರೆ, ಸುಮಾರು 8 ಗಂಟೆ ಕಾರ್ಯ ನಿರ್ವಹಿಸಲಿದೆ. ಮಾನವ ಆದೇಶ (ಹ್ಯೂಮನ್ ಕಮಾಂಡ್)ದಂತೆ ಕೆಲಸ ಮಾಡುತ್ತದೆ. ಇದರ ಸಂಚಾರಕ್ಕಾಗಿಯೇ ಅಡುಗೆ ಕೋಣೆ ಬಳಿಯಿಂದ ಗ್ರಾಹಕರು ಕೂರುವ ಪ್ರತಿ ಟೇಬಲ್ವರೆಗೆ ಕಾಂತೀಯ ಪಟ್ಟಿ (ಮ್ಯಾಗ್ನೆಟಿಕ್ ಸ್ಟ್ರೈಪ್) ಅಳವಡಿಸಲಾಗಿದೆ. ಗರಿಷ್ಠ 10 ಕೆಜಿಯಷ್ಟು ವಸ್ತುಗಳನ್ನಿಟ್ಟರೂ ನಿರಾಯಾಸವಾಗಿ ಸೂಚಿತ ಸ್ಥಳಕ್ಕೆ ತಲುಪಿಸುತ್ತದೆ.
ಪ್ರವಾಸಿ ತಾಣದ ಮಾಹಿತಿ
“ಮೈಸೂರು ನಗರದ ಸುತ್ತಮುತ್ತಲಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳು, ಇಲ್ಲಿಂದ ಎಷ್ಟು ದೂರವಾಗುತ್ತದೆ? ಮೈಸೂರಿನ ಸಂಕ್ಷಿಪ್ತ ಇತಿಹಾಸ, ಪ್ರವಾಸಿ ತಾಣಗಳು, ಬಸ್, ರೈಲು ನಿಲ್ದಾಣಕ್ಕಿರುವ ಅಂತರವನ್ನು ಯಾರಾದರು ಕೇಳಿದರೂ ಸಂಪೂರ್ಣ ವಿವರ ನೀಡುತ್ತದೆ. ಸದ್ಯ 20 ಟೇಬಲ್ಗಳಿಗೆ ರೋಬೋ ಸೇವೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸೇವೆ ವಿಸ್ತರಿಸಲಾಗುವುದು,” ಎನ್ನುತ್ತಾರೆ ರೋಬಾಟಿಕ್ ಎಂಜಿನಿಯರ್.