ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ. 10 ರಂದು ನಡೆಯಲಿದ್ದು, ಅದಕ್ಕೂ ಮೊದಲೇ ಏಪ್ರಿಲ್ 29 ರಿಂದ ಮೇ. 6 ರವರೆಗೆ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ತಮ್ಮ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ನೀಡಲಾಗಿದೆ.
ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದ್ದು, 99,529 ಮತದಾರರು ಮನೆಯಿಂದಲೇ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಮತದಾನ ಪಡೆದುಕೊಳ್ಳಲು ಚುನಾವಣಾ ಸಿಬ್ಬಂದಿ ಮನೆಗೆ ಬರಲಿದ್ದಾರೆ.
ಚುನಾವಣಾ ಸಿಬ್ಬಂದಿ ಮನೆಗೆ ಬಂದಾಗ ಮತದಾರರು ಮನೆಯಲ್ಲಿ ಇಲ್ಲದಿದ್ದರೆ ಎರಡನೇ ಅವಕಾಶ ನೀಡಲಾಗುತ್ತದೆ. ಎರಡನೇ ಬಾರಿಗೂ ಮನೆಯಲ್ಲಿ ಇಲ್ಲದಿದ್ದರೆ ಮೂರನೇ ಬಾರಿ ಅವಕಾಶ ನೀಡಲಾಗುವುದಿಲ್ಲ. ಮತ ಕೇಂದ್ರಗಳಲ್ಲೂ ಬಂದು ಮತದಾನ ಮಾಡಲು ಅವಕಾಶ ಇರುವುದಿಲ್ಲ ಎಂದು ಚುನಾವಣಾ ಅಯೋಗ ಮಾಹಿತಿ ನೀಡಿದೆ.