ಬಂಟ್ವಾಳ: ಕೂಲಿ ಕೆಲಸ ಮಾಡಿ ಹಿಂತಿರುಗುತ್ತಿದ್ದಾಗ ಕಣಜದ ಹುಳು ದಾಳಿಯಿಂದ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.21 ರಂದು ನಡೆದಿದೆ.
ಮೃತ ಮಹಿಳೆಯನ್ನು ಮೀನಾಕ್ಷಿ (64) ಎಂದು ಗುರುತಿಸಲಾಗಿದೆ. ಘಟನೆ ವಿವರ ಮೀನಾಕ್ಷಿಯವರು ಕೂಲಿ ಕೆಲಸ ಮಾಡಿಕೊಂಡಿದ್ದು, ಅ.10 ರಂದು ಕೂಲಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ 1 ಗಂಟೆಗೆ ಕೆಲಸಬಿಟ್ಟು ಮಹಾಬಲ ಆಳ್ವರವರ ಜಮೀನಿನ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ದಾರಿಬದಿಯಲ್ಲಿ ಇದ್ದ ಒಣ ಕಟ್ಟಿಗೆಯೊಂದನ್ನು ಎಳೆದಿದ್ದಾರೆ. ಆಗ ಅದರಲ್ಲಿದ್ದ ಕಣಜದ ಹುಳುಗಳು ಕಚ್ಚಿದ್ದು, ತಕ್ಷಣ ಅಲ್ಲಿಂದ ಬೊಬ್ಬೆ ಹಾಕಿಕೊಂಡು ಮಹಾಬಲ ಆಳ್ವ ರವರ ಮನೆಗೆ ಓಡಿಹೋಗಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಅ.21 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.