ಬೆಂಗಳೂರು : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ವಂದಿತಾ ಶರ್ಮಾ ( Vandita Sharma IPS ) ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ ರವಿಕುಮಾರ್ ( CS P Ravikumar ) ಅವರ ವಯೋ ನಿವೃತ್ತಿಯಿಂದ ಇದೇ ಮೇ 31 ರಂದು ತೆರವಾಗಲಿರುವ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986 ನೇ ಸಾಲಿನ ತಂಡದ ವಂದಿತಾ ಶರ್ಮಾ ಉತ್ತರಾಧಿಕಾರಿಯಾಗಲಿದ್ದಾರೆ. ವಂದಿತಾ ಶರ್ಮಾ ಅವರು ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ.
ಇದೀಗ ವಂದಿತಾ ಶರ್ಮಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದೊಡನೆಯೇ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ ಮೂರೂ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಹಾಗೂ ರಾಜ್ಯ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಶಕ್ತಿ ಕೇಂದ್ರದ ಶಕ್ತಿಯಾಗಿ ಹೊಸ ದಾಖಲೆ ಸ್ಥಾಪಿಸಲಿದ್ದಾರೆ.

