ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ‘ಆಯಂಟಿ ಕಮ್ಯುನಲ್ ವಿಂಗ್’ ಎಂಬ ನೂತನ ಪೊಲೀಸ್ ಪಡೆಯನ್ನು ಸ್ಥಾಪಿಸಲಿರುವ ಕುರಿತು ಇಂದು ಗೃಹಸಚಿವರು ಘೋಷಣೆ ಮಾಡಿದ ಬೆನ್ನಿಗೇ ಸ್ವಾಮೀಜಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಮಾತ್ರವಲ್ಲ, ವಿಂಗ್ ಹೆಸರಿನಲ್ಲಿ ಹಿಂದು ಹುಡುಗರಿಗೆ ತೊಂದರೆ ಕೊಡುವಂತಿಲ್ಲ ಎಂದೂ ತಾಕೀತು ಮಾಡಿದ್ದಾರೆ.ಮಂಗಳೂರಿನಲ್ಲಿ ಗುರುಪುರದ ಶ್ರೀವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಅವರು ‘ಆಯಂಟಿ ಕಮ್ಯುನಲ್ ವಿಂಗ್’ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರ ದ್ವಂದ್ವ ನಿಲುವಿನಿಂದ ಸಮಾಜದಲ್ಲಿ ಕಂದಕ ಸೃಷ್ಟಿಸಬಾರದು. ತಂಗಿಯೊಬ್ಬಳು ಮತಾಂಧನ ಕೈಗೆ ಸಿಲುಕಿದಲ್ಲಿ ಅದನ್ನು ನೋಡಿಕೊಂಡು ಇರುವಂತಿಲ್ಲ ಎಂದಿರುವ ಸ್ವಾಮೀಜಿ, ವಿಂಗ್ ಹೆಸರಲ್ಲಿ ಅಮಾಯಕ ಹಿಂದು ಹುಡುಗರನ್ನು ತಡೆದರೆ ಪರಿಣಾಮ ನೆಟ್ಟಗಿರಲ್ಲ. ಕಾನೂನು ಪ್ರಕಾರವೇ ನಾವು ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಹೆಚ್ಚಾಗಿದೆ. ಇದನ್ನು ನಾವು ತಡೆಯದಿದ್ದರೆ ಇಲಾಖೆ ಹಾಗೂ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನೈತಿಕ ಪೊಲೀಸ್ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದಕ್ಕಾಗಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ‘ಆಯಂಟಿ ಕಮ್ಯುನಲ್ ವಿಂಗ್’ ಪ್ರಾರಂಭ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.