ಉಳ್ಳಾಲ: ಇಲ್ಲಿನ ಪಿಲಾರು ಜಾತ್ರೆಗೆಂದು ಬಂದಿದ್ದ ಯುವಕನೋರ್ವನು ಚಿಕ್ಕಮ್ಮನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಪ್ರಕಾಶ್ ನಗರ ಎಂಬಲ್ಲಿ ನಡೆದಿದೆ. ನಗರದ ಪಡೀಲು ನಿವಾಸಿ ಸೌರವ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ.
ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿ ಶನಿವಾರ ಹಾಗೂ ಆದಿತ್ಯವಾರ ಪಂಜಂದಾಯ ದೈವದ ದೊಂಪದ ಬಲಿ ಉತ್ಸವ ನೆರವೇರಿತ್ತು. ಹಾಗಾಗಿ ಪಿಲಾರು ಪ್ರಕಾಶ್ ನಗರದ ಸುಜಾತ ಎಂಬವರ ಮನೆಗೆ ಪಡೀಲಿನ ಸಹೋದರಿಯ ಪುತ್ರ ಸೌರವ್ ನಿನ್ನೆ ಬೆಳಗ್ಗೆ ಬಂದಿದ್ದರು. ಜಾತ್ರೆಗೆ ತೆರಳಿ ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ನಿದ್ದೆ ಮಾಡುತ್ತೇನೆಂದು ಕೋಣೆಗೆ ತೆರಳಿದ್ದಾರೆ. ಆದರೆ ಸಂಜೆ ಹೊತ್ತಿಗೆ ಕೋಣೆಯಲ್ಲಿ ಸೌರವ್ ಫ್ಯಾನಿಗೆ ನೇಣು ಬಿಗಿದಿ ಆತ್ಮಹತ್ಯೆ ಮಾಡಿಕೊಂಡಿದ್ದನು.
ಈ ಬಗ್ಗೆ ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ಸೌರವ್ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.