ಮಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ಮಂಗಳೂರಿನ ದಕ್ಕೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 75 ಬೋಟ್ ರ್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ‘ಎಲ್ಲರಿಗೂ ಅಮೃತಮಹೋತ್ಸವದ ಶುಭಾಶಯಗಳನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮೀನುಗಾರಿಕೆ ನಡೆಯಲಿ, ಈ ಮೂಲಕ ಮೀನುಗಾರರ ಬದುಕು ಹಸನಾಗಲಿ’ ಎಂದು ಶುಭ ನುಡಿದರು.

ಪ್ರತಿಯೊಂದು ಬೋಟು ಮೇಲ್ಭಾಗದಲ್ಲಿ ತಿರಂಗವನ್ನು ಕಟ್ಟಿ ವಿಶೇಷ ರೀತಿಯಲ್ಲಿ ಬೋಟುಗಳನ್ನು ಅಲಂಕೃತಗೊಳಿಸಲಾಗಿತ್ತು. ಕಾರ್ಯಕ್ರಮಕ್ಕೆ ಇಂಡಿಯನ್ ಕೋಸ್ಟ್ ಗಾರ್ಡ್ ಸಹಭಾಗಿತ್ವವನ್ನು ನೀಡಿತ್ತು.
ಜಿಲ್ಲಾ ಪಂಚಾಯತ್ ಸಿಇಒ ಡಾ. ಕುಮಾರ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್, ಉಪ ನಿರ್ದೇಶಕರಾದ ಸುಶ್ಮಿತಾ, ರೇವತಿ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು , ಮೀನುಗಾರ ಮುಖಂಡರು , ಸದಸ್ಯರು, ಬೋಟ್ ಚಾಲಕರು, ಮಾಲಕರು ಉಪಸ್ಥಿತರಿದ್ದರು.
ಮಂಗಳೂರಿನ ಧಕ್ಕೆಯಿಂದ ಹೊರಟ ಬೋಟು ರ್ಯಾಲಿ ಕೂಳೂರಿಗೆ ತೆರಳಿ ಮತ್ತೆ ಅಲ್ಲಿಂದ ಮರುಪ್ರಯಾಣದಲ್ಲಿ ಉಳ್ಳಾಲದತ್ತ ತೆರಳಿದೆ. ನೂರಾರು ಮಂದಿ ಮೀನುಗಾರರು ಬೋಟಿನಲ್ಲಿದ್ದು, ಭಾರತ್ ಮಾತಾಕೀ ಜೈ ಘೋಷಣೆ ಮೊಳಗಿಸಿದರು.