ಬೆಂಗಳೂರು: ವಿಧಾನಸಭಾ ಚುನಾವಣೆಗೆ ( Assembly Election ) ವರ್ಷ ಬಾಕಿ ಇರುವಾಗಲೇ, ಚುನಾವಣಾ ತಂತ್ರಗಾರಿಕೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ( BJP Government ) ತೊಡಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿತ್ತು.
ಇದೀಗ ಮುಂದುವರೆದು ಪೊಲೀಸ್ ಇಲಾಖೆಯ ( Karnataka Police ) ಕೆಲಸಕ್ಕೆ ಮತ್ತಷ್ಟು ಚುರುಕು ಮುಟ್ಟಿಸೋ ಸಲುವಾಗಿ, ಮೇಜರ್ ಸರ್ಜರಿಗೆ ಮುಂದಾಗಿದೆ. ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೇರಿದಂತೆ ಎಸ್ಪಿಗಳ ವರ್ಗಾವಣೆಯನ್ನು ಮಾಡಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ರಾಜ್ಯ ಸರ್ಕಾರದಿಂದ 100ಕ್ಕೂ ಹೆಚ್ಚು ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಲಾಗಿತ್ತು. ಈಗ ಚುನಾವಣೆ ದೃಷ್ಠಿಯಿಂದ ಬೆಂಗಳೂರು ನಗರ, ಮೈಸೂರು, ಮಂಗಳೂರು ನಗರ ಆಯುಕ್ತರ ವರ್ಗಾವಣೆಗೆ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ. ಇವರ ಅಧಿಕಾರಾವಧಿ ಒಂದು ವರ್ಷ ಪೂರ್ಣಗೊಂಡ ಕಾರಣ, ಹೊಸ ಆಯುಕ್ತರ ನೇಮಕಕ್ಕೆ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ವರ್ಗಾವಣೆಗೆ ಮುಂದಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಪೈಪೋಟಿ ನಡೆದಿದೆ ಎಂದು ತಿಳಿದು ಬಂದಿದೆ. ಈ ರೇಸ್ ನಲ್ಲಿ ದಯಾನಂದ್, ಅಲೋಕ್ ಕುಮಾರ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿದೆ.
ಇನ್ನೂ ಬೆಂಗಳೂರು ನಗರ ಒಳಗೊಂಡಂತೆ ಡಿಸಿಪಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವರ್ಗಾವಣೆಗೂ ಸರ್ಕಾರ ತಯಾರಿ ನಡೆಸಿದೆ ಎನ್ನಲಾಗಿದೆ. ಈ ಸಂಬಂಧ ಶೀಘ್ರವೇ ವರ್ಗಾವಣೆ ಆದೇಶ ಹೊರಡಿಸಿ, ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯನ್ನು ಮಾಡಲಿದೆ ಎಂದು ತಿಳಿದು ಬಂದಿದೆ.

