ಉಡುಪಿ : ಮಳೆಗಾಲದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವೇಳೆ ಸಾವು ಸಂಭವಿಸಿದ ಹಿನ್ನಲೆ ಇದೀಗ ಉಡುಪಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ಜಲಪಾತ ವೀಕ್ಷಣೆ, ಬೀಚ್ ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಭೇಟಿ ನೀಡುವುದನ್ನು ನಿರ್ಬಂಧ ಹೇರಿರುವುದನ್ನು ಆಗಸ್ಟ್ ಅಂತ್ಯದವರೆಗೂ ವಿಸ್ತರಿಸಿದೆ.
ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ಯುವಕನೋರ್ವ ನೀರುಪಾಲಾದ ದುರ್ಘಟನೆಯ ಬಳಿಕ ಬೀಚ್ ಸಹಿತ ಜಲಪಾತ ಹಾಗೂ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.
ಪ್ರಸ್ತುತ ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ನಿರ್ಬಂಧವನ್ನು ಹಿಂಪಡೆದಿಲ್ಲ. ಇದನ್ನು ಈ ತಿಂಗಳ ಅಂತ್ಯದವರೆಗೂ ಮುಂದುವರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಮಳೆಗಾಲವಾದ್ದರಿಂದ ಯಾವಾಗ ಬೇಕಾದರೂ ಮಳೆಯ ಪ್ರಮಾಣದಲ್ಲಿ ಏರಿಕೆಯಾಗಬಹುದು. ನಿರ್ಬಂಧ ವಾಪಸ್ ಪಡೆದ ಅನಂತರದಲ್ಲಿ ಪುನಃ ಪರಿಸ್ಥಿತಿ ನಿಯಂತ್ರಿಸುವುದು ತಕ್ಷಣಕ್ಕೆ ಕಷ್ಟವಾಗಬಹುದು. ಹೀಗಾಗಿ ತಿಂಗಳಾಂತ್ಯದವರೆಗೆ ನಿರ್ಬಂಧ ಮುಂದುವರಿಸಿ ಬಳಿಕ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಆನಂತರ ತೆರವುಗೊಳಿಸುವ ಬಗ್ಗೆ ತೀರ್ಮಾನಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾ ತಿಳಿಸಿದ್ದಾರೆ.