ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಮಂಗಳೂರು ವಿವಿ ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದ ದಶಮಾನ ಸಡಗರದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದಲ್ಲಿ ಯಕ್ಷಾಂಗಣವು ಒಂದು ಹೊಸ ಪ್ರಯೋಗದ ಮೂಲಕ ಪ್ರಜ್ಞಾವಂತರ ಗಮನ ಸೆಳೆದಿದೆ.
ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಗಾಗಿ ಸಿದ್ಧಪಡಿಸಿದ್ದ ‘ಕ್ರಾಂತಿ ಕಹಳೆ’ ಮತ್ತು ‘ಸ್ವಾತಂತ್ರ್ಯ ವಿಜಯ’ ಎಂಬ ಕಿರು ಪ್ರಸಂಗಗಳನ್ನು ಪ್ರಸ್ತುತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಲುವಾಗಿ ‘ಸ್ವರಾಜ್ಯ ಸ್ವಾತಂತ್ರ್ಯ ವಿಜಯ’ ಎಂಬ ಪೂರ್ಣಾವಧಿ ತಾಳಮದ್ದಳೆ ರೂಪದಲ್ಲಿ ಪ್ರಯೋಗಿಸಿ ಅದು ಇತಿಹಾಸದ ಪುನರ್ಮನನ ಮಾಡಿದ ಸಾಧನೆಗೆ ಸಾಕ್ಷಿಯಾಗಿದೆ.
ಕಥಾ ಸಾರ :
ಭಾರತದ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸವನ್ನಾಧರಿಸಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂಯೋಜಿಸಿದ್ದ ಕಥಾ ಹಂದರಕ್ಕೆ ಡಾ.ದಿನಕರ ಎಸ್. ಪಚ್ಚನಾಡಿ ಪದ್ಯಗಳನ್ನು ರಚಿಸಿದ್ದು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ ತಂಡ ಅವುಗಳನ್ನು ಎರಡು ಕಂತುಗಳಲ್ಲಿ ಮಂಗಳೂರು ಬಾನುಲಿ ಕೇಂದ್ರ ಮೂಲಕ ಈ ಹಿಂದೆ ರೇಡಿಯೋ ಪ್ರಸಾರ ಮಾಡಿತ್ತು.
ವಿದೇಶೀ ಪೋರ್ಚುಗೀಸರೊಡನೆ ಹೋರಾಡಿದ ಪ್ರಪ್ರಥಮ ಸ್ವಾತಂತ್ರ್ಯ ಸೇನಾನಿ ಉಳ್ಳಾಲದ ಅಬ್ಬಕ್ಕ ರಾಣಿಯ ಪ್ರವೇಶದೊಂದಿಗೆ ಆರಂಭವಾಗುವ ಈ ಪ್ರಸಂಗದಲ್ಲಿ ಮೈಸೂರಿನ ಕದನ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ವಂಗ ಭಂಗ – ಚಳುವಳಿ, ಜಲಿಯನ್ ವಾಲಾಬಾಗ್ ದುರಂತ, ಆಜಾದ್ – ಭಗತ್ ಸಿಂಗ್ ಬಲಿದಾನ, ಗಾಂಧಿ ಯುಗ, ಸತ್ಯಾಗ್ರಹ, ಸ್ವದೇಶೀ ಆಂದೋಲನ ಹಾಗೂ ಅಂತಿಮವಾಗಿ ಸ್ವಾತಂತ್ರ್ಯ ಘೋಷಣೆಯ ವರೆಗಿನ ಘಟನೆಗಳನ್ನು ಪ್ರಸ್ತುತ ‘ಸ್ವರಾಜ್ಯ ಸ್ವಾತಂತ್ರ್ಯ ವಿಜಯ’ ಪ್ರಸಂಗದಲ್ಲಿ ಆಯ್ದುಕೊಳ್ಳಲಾಗಿದೆ.
ಭಾಗವಹಿಸಿದ ಕಲಾವಿದರು :
ಇದೇ 2022 ನವಂಬರ್ 25 ರಂದು ಸಾಕಷ್ಟು ರಂಜನೀಯವಾಗಿ ಹಾಗೂ ಅಷ್ಟೇ ಬೋಧಪ್ರದವಾಗಿ ಜರಗಿದ ಈ ಐತಿಹಾಸಿಕ ತಾಳಮದ್ದಳೆಯಲ್ಲಿ ಭಾಗವತರಾಗಿ ಅಮೃತ ಅಡಿಗ, ಚಂಡೆ-ಮದ್ದಳೆಗಳಲ್ಲಿ ಮಯೂರ್ ನಾಯಗ ಮತ್ತು ಕೌಶಲ್ ರಾವ್ ಪುತ್ತಿಗೆ ಭಾಗವಹಿಸಿದ್ದರು.
ಭಾಸ್ಕರ ರೈ ಕುಕ್ಕುವಳ್ಳಿ (ಗಾಂಧೀಜಿ/ಭಗತ್ ಸಿಂಗ್), ಮಹಾಬಲ ಶೆಟ್ಟಿ ಕೂಡ್ಲು (ಬಾಲಗಂಗಾಧರ ತಿಲಕ್), ಜಿ.ಕೆ.ಭಟ್ ಸೇರಾಜೆ (ತಾತ್ಯಾ ಟೋಪೆ), ಗಣರಾಜ ಕುಂಬಳೆ (ಬಹದ್ದೂರ್ ಶಾ/ ಚಂದ್ರಶೇಖರ ಆಜಾದ್), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ರಾಣಿ ಅಬ್ಬಕ್ಕ/ ವಿದ್ಯಾವತಿ), ಸರಪಾಡಿ ಅಶೋಕ್ ಶೆಟ್ಟಿ (ಸುಭಾಷ್ ಚಂದ್ರ ಬೋಸ್/ ಟಿಪ್ಪು ಸುಲ್ತಾನ್), ಉಮೇಶ್ ಆಚಾರ್ಯ ಗೇರುಕಟ್ಟೆ (ವಿಪಿನ್ ಚಂದ್ರ ಪಾಲ್/ ಮೌಂಟ್ ಬ್ಯಾಟನ್), ಸದಾಶಿವ ಆಳ್ವ ತಲಪಾಡಿ (ಜವಾಹರ್ ಲಾಲ್ ನೆಹರು/ಕಾರ್ನವಾಲೀಸ್), ಎಂ.ಎಂ.ಸಿ. ರೈ ( ಪೋರ್ಚುಗೀಸ್ ನೊರೋನ್ಹಾ/ ಬ್ರಿಟಿಷ್ ಅಧಿಕಾರಿ) ಮತ್ತು ಹರಿಶ್ಚಂದ್ರ ನಾಯಗ (ಬ್ರಿಟಿಷ್ ಸೈನಿಕ) ಅರ್ಥಧಾರಿಗಳಾಗಿದ್ದರು.