ದೇರಳಕಟ್ಟೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಷ್ಮಾ ಜನಾರ್ಧನ್ (56) ಅವರು ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ದೇರಳಕಟ್ಟೆ ಕಾಯರ್ ಪಳಿಕೆಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿಯಾಗಿದ್ದ ಸುಷ್ಮಾ ಅವರು ಬಿಜೆಪಿ ತಳಮಟ್ಟದ ಕಾರ್ಯಕರ್ತೆಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಫರ್ಧಿಸಿ ಜಯ ಗಳಿಸಿದ್ದಲ್ಲದೆ, ಜಿಲ್ಲಾ ಪಂಚಾಯತ್ನ ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದರು. ಬಿಜೆಪಿ, ಜೆಡಿಎಸ್ 20-20 ಸರಕಾರದಲ್ಲಿ ಸಚಿವರಾಗಿದ್ದ ನಾಗರಾಜ ಶೆಟ್ಟಿಯವರ ಅವಧಿಯಲ್ಲಿ ಸುಷ್ಮಾ ಜನಾರ್ಧನ್ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸುಷ್ಮಾ ಅವರಿಗೆ ಕೆಳ ವರ್ಷಗಳ ಹಿಂದೆ ಕ್ಯಾನ್ಸರ್ ವಕ್ಕರಿಸಿದ್ದರೂ ಚಿಕಿತ್ಸೆ ಪಡೆದು ಗುಣಮುಖರಾಗಿ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಇತ್ತೀಚಿಗೆ ಮತ್ತೆ ಕರುಳು ಕ್ಯಾನ್ಸರ್ ಉಲ್ಬಣಗೊಂಡು ಹಾಸಿಗೆ ಹಿಡಿದಿದ್ದ ಸುಷ್ಮಾ ಅವರು ಬುಧವಾರ ಮೃತಪಟ್ಟಿದ್ದಾರೆ.