ಮಂಗಳೂರು : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ತೀರ್ಪು ಅತೃಪ್ತಿಕರವಾಗಿದೆ. ಇದು ಮುಸ್ಲಿಮರ ಸಾಂವಿಧಾನಿಕ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ಪರಿಗಣಿಸದೆ ಸರ್ಕಾರದ ಆಶಯದ ನಿರ್ಧಾರವನ್ನು ಎತ್ತಿಹಿಡಿಯುವಂತಿದೆ ಎಂದು ಮುಸ್ಲಿಂ ಒಕ್ಕೂಟಗಳು ಗುರುವಾರದಂದು ಬಂದ್ ಕರೆ ನೀಡಿದ್ದು, ನಗರದಲ್ಲಿ ಮುಸ್ಲಿಂ ಮಾಲೀಕತ್ವದ ಹಲವು ಅಂಗಡಿ, ಮಳಿಗೆಗಳು ತೆರೆಯದೆ ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ.

ಬಂದ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಕಮಿಷನರ್ ಎನ್ ಶಶಿಕುಮಾರ್, ಹಿಜಾಬ್ ಕುರಿತಾಗಿ ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಬಂದ್ ಬಗ್ಗೆ ಗಮನಿಸಿದ್ದು, ಇಂದು ಬೆಳಗ್ಗೆ ನಾಲ್ಕು ಘಂಟೆಗಳಿಂದ ಸಿಬ್ಬಂದಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಲ್ಲಿಯೂ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟು, ವಾಹನ ಸಂಚಾರ, ವ್ಯಾಪಾರ ವಹಿವಾಟು, ಶಾಲಾ ಕಾಲೆಜುಗಳನ್ನು ಬಂದ್ ಮಾಡಲಾಗಿಲ್ಲ, ಎಲ್ಲರೂ ಸ್ವಯಂಪ್ರೇರಿತವಾಗಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ನಗರದ ಸ್ಥಳೀಯ ಖಾಸಗಿ ವಾಹನಗಳ, ಸ್ಥಳೀಯ ಬಸ್ ಗಳ ಓಡಾಟಗಳಲ್ಲೂ ವ್ಯತ್ಯಯ ಉಂಟಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.