ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯ ಪೂರಕ ಪರೀಕ್ಷೆ ಕೇವಲ ವರ್ಷದಲ್ಲಿ ಒಂದು ಬಾರಿ ಮಾತ್ರವೇ ನಡೆಸಲಾಗುತ್ತಿತ್ತು. ಇದೀಗ ಈ ಪೂರಕ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಹೌದು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎರಡು ಬಾರಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ನಡೆಸಲಾಗುವ ಪೂರಕ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ಶಿಕ್ಷಣ ಇಲಾಖೆ ಚಿಂತನೆಯನ್ನು ನಡೆಸಿದೆ.
ಇಲ್ಲಿಯವರೆಗೆ ಶಾಲಾ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ನಂತ್ರ, ಅನುತ್ತೀರ್ಣರಾದ, ಅನಿವಾರ್ಯ ಕಾರಣದಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗಾಗಿ ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು.
ಮೊದಲ ಹಂತದಲ್ಲಿ ಅನುತ್ತೀರ್ಣರಾದ ಶೇ.75ರಷ್ಟು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ. ಆದ್ರೇ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಮಾಣ ಶೇ.50ರಷ್ಟು ಮಾತ್ರವೇ ಆಗಿದೆ. ಆದ್ದರಿಂದ ಇನ್ನೊಂದು ಬಾರಿ ಪೂರಕ ಪರೀಕ್ಷೆ ನಡೆಸಿ, ಎರಡನೇ ಬಾರಿಯೂ ಅನುತ್ತೀರ್ಣರಾಗಿರುವ ಇನ್ನಷ್ಟು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಉದ್ದೇಶಕ್ಕೆ ಈಗ ಶಿಕ್ಷಣ ಇಲಾಖೆ ಇಳಿದಿದೆ.
ಇಲ್ಲಿಯವರೆಗೆ ಪೂರಕ ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಲು ಒಂದು ವರ್ಷ ಕಾಯಬೇಕಿತ್ತು. ಇದರಿಂದ ಒಂದು ವರ್ಷ ವಿದ್ಯಾರ್ಥಿಗಳ ಕಾಲ ವ್ಯರ್ಥವಾಗುತ್ತಿತ್ತು. ಇದಲ್ಲದೇ ಕೆಲ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು. ಹೀಗಾಗಿ ಹೊಸ ಪರೀಕ್ಷಾ ಕ್ರಮದಂತೆ ವರ್ಷದಲ್ಲಿ ಎರಡು ಬಾರಿಗೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಜೊತೆಗೆ ಮೊದಲ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾದ 15 ದಿನಗಳ ಒಳಗಾಗಿ ಎರಡನೇ ಪೂರಕ ಪರೀಕ್ಷೆ ನಡೆಸಲು ಉದ್ದೇಶಿಸಿದೆ.
ಈಗಾಗಲೇ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಶಿಕ್ಷಣ ಕ್ಷೇತ್ರದ ಪ್ರಮುಖರೊಂದಿಗೆ ಚರ್ಚೆ ನಡೆಸಿ, ರೂಪುರೇಷೆಗಳು, ಪರೀಕ್ಷಾ ಕ್ರಮದ ಬಗ್ಗೆಯೂ ಕರಡು ಸಿದ್ಧಪಡಿಸುವಂತೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ.