ಮಂಗಳೂರು:ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಪದ್ಮಶ್ರೀ ಪುರಸ್ಕೃತ ಹೋರಾಟಗಾರ್ತಿ ಸುಕ್ರಿ ಬೊಮ್ಮಗೌಡ ಅವರ ಚಿಕಿತ್ಸಾ ವೆಚ್ಚವನ್ನು ಸರಕಾರ ಬರಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕೆಎಂಸಿ ಆಸ್ಪತ್ರೆ ಭೇಟಿ ನೀಡಿ, ಸುಕ್ರಜ್ಜಿ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸುಕ್ರಜ್ಜಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆತಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ವಿಶೇಷ ನಿಗಾವಹಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದರು.
ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಸುಕ್ರಜ್ಜಿ ಅವರನ್ನು ಅಂಕೋಲಾದಿಂದ ಶನಿವಾರ ಮಂಗಳೂರಿಗೆ ಕರೆತಂದು, ಕೆಎಂಸಿಯಲ್ಲಿ ದಾಖಲಿಸಲಾಗಿತ್ತು. ಭಾನುವಾರ ಅವರಿಗೆ ನಾಲ್ಕು ಸ್ಟಂಟ್ ಅಳವಡಿಸಿದ್ದು, ಚಿಕಿತ್ಸೆಗೆ ಶೀಘ್ರ ಸ್ಪಂದಿಸಿದ ಕಾರಣ, ಸೋಮವಾರ ಸಂಜೆ ಅವರನ್ನು ಐಸಿಯುದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಮಂಗಳವಾರ ಎಲ್ಲರೊಡನೆ ಮಾತನಾಡಿದ ಅವರು, ಆಹಾರ ಸೇವಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ವಿಶ್ವಾಸವನ್ನೂ ಸುಕ್ರಜ್ಜಿ ವ್ಯಕ್ತಪಡಿಸಿದ್ದಾರೆ.

