ಉಡುಪಿ: ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ. 2008 ಜೂನ್ 10ರಂದು ಶಾಸಕ ರಘುಪತಿಭಟ್ ಪತ್ನಿ ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು, ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಆತುಲ್ ರಾವ್, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿ ಕರೆದು ಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಇಟ್ಟು, ಅದರ ಒಳಗೆ ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದರೆಂದು ದೂರಲಾಗಿತ್ತು. ಈ ಬಗ್ಗೆ ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿ, ಬಳಿಕ ಸಿಓಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಆರೋಪಿ ವಿರುದ್ಧ ಸಿಓಡಿ ಪೊಲೀಸರು 2008ರ ಆ.22ರಂದು ಪ್ರಾರಂಭಿಕ ಮತ್ತು 2009ರ ಜು.29ರಂದು ಅಂತಿಮ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು, ಇದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಟಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರುಪಡಿಸಿ ದುರುಪಯೋಗ ಪಡಿಸಿರುವ ಬಗ್ಗೆ ಆರೋಪ ಮಾಡಲಾಗಿತ್ತು. ಇದರಲ್ಲಿ ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾಳ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಓಡಿ ಅಧಿಕಾರಿಗಳು ಕೈಬಿಟ್ಟಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಐಪಿಸಿ 458ಕಾಯಿದೆ ಯದಿ ಒಂದು ವರ್ಷ ಜೈಲುಶಿಕ್ಷೆ ಮತ್ತು 5000ರೂ. ದಂಡ, ಐಪಿಸಿ 417, 455, 471 ಕಾಯಿದೆಯಡಿ ತಲಾ ಆರು ತಿಂಗಳು ಸಜೆ ಹಾಗೂ 5000ರೂ. ದಂಡ ವಿಧಿಸಿ ಆದೇಶ ನೀಡಿದರು. ಸಿಓಡಿ ಪರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಶಿವಪ್ರಸಾದ್ ಆಳ್ವ ವಾದ ಮಂಡಿಸಿದ್ದರು.
©2021 Tulunada Surya | Developed by CuriousLabs