ಬೆಂಗಳೂರಿನ ವಿವಿ ಪುರ ಬಳಿ ಇರುವ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೊದಲ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದ ವಾಣಿ (23) ಎಂಬಾಕೆ ಮೃತ ದುರ್ದೈವಿ. ಸೋಮವಾರ ಕಾಲೇಜು ಕಟ್ಟಡದ ಆರನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಳು.
ಕಾಲೇಜು ಆಡಳಿತ ಮಂಡಳಿಯವರು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ, ತೀವ್ರ ರಕ್ತಸ್ರಾವದಿಂದಾಗಿ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಆತ್ಮಹತ್ಯೆಗೂ ಮುನ್ನ ಎರಡು ಪುಟಗಳ ಡೆತ್‌ನೋಟ್ ಬರೆದಿಟ್ಟಿರುವ ವಾಣಿ, ಮದುವೆ ವಿಚಾರಕ್ಕೆ ಬೇಸತ್ತು ಹೋಗಿದ್ದಳು ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿ ರದ್ದಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ವಿವಿ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.