ಹೈದರಾಬಾದ್: ಕಳೆದ ತಿಂಗಳು ದೆಹಲಿಯಲ್ಲಿ ತನ್ನ ಪ್ರೇಯಸಿ ಶ್ರದ್ಧಾ ವಾಕರ್ ಅವರನ್ನು ಕೊಂದು ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಆರೋಪದ ಮೇಲೆ ಅಫ್ತಾಬ್ ಅಮೀನ್ ಪೂನಾವಾಲಾ ಅವರನ್ನು ಬಂಧಿಸಲಾಗಿದೆ. ಆದ್ರೆ, ಇತ್ತೀಚೆಗೆ ಇಂತದ್ದೇ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಹೌದು, ಹೊಸ ಘಟನೆಯೊಂದರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೀಗ ಹಾಕಿದ ಬಾಡಿಗೆ ಮನೆಯೊಳಗೆ ಇರಿಸಲಾಗಿದ್ದ ಡ್ರಮ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ. ಈ ಕೊಲೆ ಒಂದು ವರ್ಷದ ಹಿಂದೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಾಡಿಗೆದಾರ ಬಾಡಿಗೆ ಪಾವತಿಸದ ಕಾರಣ ಮನೆಯ ಮಾಲೀಕ ಮನೆಯ ಬಾಗಿಲು ಒಡೆದು ನೋಡಿದಾಗ ಡ್ರಮ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿವೆ.
‘ಇಂದು ವಿಶಾಖಪಟ್ಟಣಂನ ಮಧುರವಾಡದಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮನೆಯಲ್ಲಿದ್ದ ಸಾಮಾನುಗಳನ್ನು ತೆರವುಗೊಳಿಸಲು ಮನೆಯ ಮಾಲೀಕರು ಬಲವಂತವಾಗಿ ಮನೆಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಡಿಗೆದಾರನು ಜೂನ್ 2021 ರಲ್ಲಿ ಹೆಂಡತಿಯ ಗರ್ಭಧಾರಣೆಯನ್ನು ಉಲ್ಲೇಖಿಸಿ ಬಾಕಿ ಪಾವತಿಸದೆ ಮನೆಯನ್ನು ಖಾಲಿ ಮಾಡಿದ್ದಾನೆ. ಇಷ್ಟು ದಿನ ಮನೆ ಬಾಡಿಗೆ ಕಟ್ಟದೇ ಮತ್ತು ಬಾಡಿಗೆದಾರ ಮನೆಗೆ ಬಾರದ್ದನ್ನು ಕಂಡ ಮಾಲೀಕ, ಮನೆಯ ಹಂಬಾಗಿಲಿನಿಂದ ಬಲವಂತವಾಗಿ ಮನೆಗೆ ನುಗ್ಗಿ ಬಾಡಿಗೆದಾರನ ಸಾಮಾನುಗಳನ್ನು ತೆರವುಗೊಳಿಸಿದ್ದಾರೆ. ಈ ವೇಳೆ ಮಹಿಳೆಯ ದೇಹದ ಭಾಗಗಳು ಡ್ರಮ್‌ನಲ್ಲಿ ಪತ್ತೆಯಾಗಿವೆ ಎಂದು ವಿಶಾಖಪಟ್ಟಣಂ ನಗರದ ಪೊಲೀಸ್ ಆಯುಕ್ತ ಸಿಎಚ್. ಶ್ರೀಕಾಂತ್ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಪುರಾವೆಗಳು ಒಂದು ವರ್ಷದ ಹಿಂದೆ ದೇಹವನ್ನು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ತೋರಿಸುತ್ತದೆ. ಅದು ಈಗ ಪತ್ತೆಯಾಗಿದೆ. ಈ ಮೃತದೇಹ ಬಾಡಿಗೆದಾರನ ಹೆಂಡತಿಯದ್ದಿರಬಹುದು ಎಂದು ನಾವು ಅನುಮಾನಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
