ಉಡುಪಿ: ಪದವಿ ಶಿಕ್ಷಣ ಕಲಿಯಲೆಂದು ದುಬೈಗೆ ತೆರಳಿದ್ದ ಮೂಲತಃ ಕಾಪು ತಾಲೂಕಿನ ವಿದ್ಯಾರ್ಥಿಯೋರ್ವ ಅನಾರೋಗ್ಯದಿಂದ ಸೋಮವಾರ ನಿಧನರಾದರು.
ಕಾಪು ಕೊಪ್ಪಲಂಗಡಿ ನಿವಾಸಿ ಅಬ್ದುಸ್ಸಲಾಂ ಸೂರಿಂಜೆ ಎಂಬವರ ಮಗ ಅಹ್ಮದ್ ಬಿಲಾಲ್(20) ಮೃತ ವಿದ್ಯಾರ್ಥಿ. ಕಾಪು ದಂಡತೀರ್ಥ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ಬಿಲಾಲ್ ಪದವಿ ಶಿಕ್ಷಣಕ್ಕಾಗಿ ದುಬೈಗೆ ತೆರಳಿದ್ದರು. ಈ ಮಧ್ಯೆ ಊರಿಗೆ ಬಂದು ಕಳೆದ ಸೆಪ್ಟೆಂಬರ್ 17ರಂದು ದುಬೈಗೆ ಮರಳಿದ್ದ ಇವರು ಜ್ವರಕ್ಕೆ ತುತ್ತಾಗಿದ್ದರು.
ನ್ಯುಮೋನಿಯಾ ಕೂಡ ಕಾಡಿದ್ದರಿಂದ ಚಿಕಿತ್ಸೆಗಾಗಿ ಶಾರ್ಜಾದಲ್ಲಿರುವ ಕುವೈಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 20 ದಿನಗಳಿಂದ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಡಿ 5ರ ಸೋಮವಾರದಂದು ನಿಧನರಾದರು ಎಂದು ತಿಳಿದುಬಂದಿದೆ.
“ಬಿಲಾಲ್ ತಂದೆ 35 ವರ್ಷಗಳಿಂದ ದುಬೈಯಲ್ಲಿ ಅನಿವಾಸಿ ಭಾರತೀಯನಾಗಿ ದುಡಿಯುತ್ತಿದ್ದ ಹಿನ್ನೆಲೆಯಲ್ಲಿ, ಪದವಿ ಶಿಕ್ಷಣ ಕಲಿಯಲು ಬಿಲಾಲ್ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ದುಬೈಗೆ ತೆರಳಿದ್ದರು. ಮೃತದೇಹದ ಅಂತ್ಯ ಸಂಸ್ಕಾರವು ದುಬೈಯ ಅಲ್ಕೂಝ್ ಮಸೀದಿಯಲ್ಲಿ ಸೋಮವಾರ ರಾತ್ರಿ ನಡೆಸಲಾಯಿತು. ಸದ್ಯ ಬಿಲಾಲ್ ಕುಟುಂಬ ದುಬೈನಲ್ಲಿದೆ” ಎಂದು ಬಿಲಾಲ್ ಸಂಬಂಧಿ ಆಸಿಫ್ ಉಚ್ಚಿಲ ಮಾಹಿತಿ ನೀಡಿದ್ದಾರೆ.
ಬಿಲಾಲ್ ತಂದೆ ತಾಯಿ ಸೇರಿದಂತೆ ಇಬ್ಬರು ಸಹೋದರಿಯರು, ಒಬ್ಬ ಸಹೋದರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.