Saturday, April 20, 2024
spot_img
More

    Latest Posts

    ನ.8ರಿಂದ ರಾಜ್ಯದಲ್ಲಿ ಅಂಗನವಾಡಿ ಆರಂಭ: ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು:  ಈಗಾಗಲೇ ಹಂತ ಹಂತವಾಗಿ ಎಲ್ಲ ಶಾಲಾ ಕಾಲೇಜುಗಳ ಭೌತಿಕ ತರಗತಿ ಆರಂಭಿಸಿರುವ ಸರ್ಕಾರ, ಇದೀಗ ನವೆಂಬರ್‌ 8 ರಿಂದ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳನ್ನೂ ಆರಂಭಿಸಲು ಅನುಮತಿ ನೀಡಿ, ಈ ಸಂಬಂಧ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ.

    18 ತಿಂಗಳಿಂದ ಮಕ್ಕಳ ಪಾಲಿಗೆ ಬಂದ್‌ ಆಗಿದ್ದ ಅಂಗನವಾಡಿಗಳಲ್ಲಿ ನ.8ರಿಂದ ಮತ್ತೆ ಚಿಣ್ಣರ ಕಲರವ ಆರಂಭವಾಗಲಿದೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಯ ಎಲ್ಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನ.8ರಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ ಮಕ್ಕಳಿಗೆ ಕಲಿಕಾ ಚಟುವಟಿಕೆ ನಡೆಸಬಹುದು. ಮೊದಲ ಹಂತದಲ್ಲಿ ಬೆಳಗ್ಗೆ 10ರಿಂದ 12ರವರೆಗೆ ಮಾತ್ರ ನಡೆಸಬೇಕು. ಕೇಂದ್ರದ ಆರಂಭಕ್ಕೂ ಮುನ್ನ ಸ್ಥಳೀಯ ಗ್ರಾಮ ಪಂಚಾಯಿ ಗಮನಕ್ಕೆ ತರಬೇಕು, ಮಕ್ಕಳ ಹಾಜರಾತಿಗೆ ಪೋಷಕರ ಅನುಮತಿ ಪತ್ರ ಪಡೆಯಬೇಕು. ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿ ಹಾಗೂ ಕೇಂದ್ರಕ್ಕೆ ಬರುವ ಮಕ್ಕಳ ಪೋಷಕರು ಎರಡೂ ಡೋಸ್‌ ಕೋವಿಡ್‌ ಲಸಿಕೆ ಪಡೆದಿರಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ.

    ಅಂಗನವಾಡಿಗೆ ಬರುವ ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿರಬೇಕು, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು. ಅದು ಪುಟ್ಟಮಕ್ಕಳ ಕೈಗೆ ಸಿಗದಂತೆ ಸಿಬ್ಬಂದಿ ಎಚ್ಚರ ವಹಿಸಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳನ್ನು ಕನಿಷ್ಠ 1 ಮೀಟರ್‌ ಅಂತರದಲ್ಲಿ ಕೂರಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ತಂಡಗಳನ್ನು ರಚಿಸಿ ಒಂದು ತಂಡ ಒಂದು ದಿನ, ಮತ್ತೊಂದು ತಂಡ ಮರುದಿನ ಬರಲು ಸೂಚಿಸಬೇಕು. ಮಕ್ಕಳು, ಸಿಬ್ಬಂದಿ ಪ್ರತಿ 30 ನಿಮಿಷಕ್ಕೊಮ್ಮೆ ಕೈತೊಳೆಯಬೇಕು. ಕೇಂದ್ರಗಳಿಗೆ ಸಾರ್ವಜನಿಕರ ಸಂದರ್ಶನ ನಿರ್ಬಂಧಿಸಬೇಕು. ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಕೋವಿಡ್‌ ಲಕ್ಷಣಗಳಿರುವ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದಂತೆ ಪೋಷಕರಿಗೆ ಸೂಚಿಸಬೇಕು. ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಸೂಚಿಸಬೇಕು ಎಂದು ತಿಳಿಸಲಾಗಿದೆ.

    15 ದಿನ ಪೌಷ್ಠಿಕ ಆಹಾರ ಮನೆಗೆ:

    ಪೂರ್ಣ ಪ್ರಮಾಣದಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯದ ಕಾರಣ ಈಗಿರುವಂತೆಯೇ ಮುಂದಿನ ಹದಿನೈದು ದಿನಗಳ ಕಾಲ ಕೇಂದ್ರದ ಪ್ರತಿ ಮಗುವಿಗೆ ಪೌಷ್ಠಿಕ ಆಹಾರದ ಧಾನ್ಯಗಳನ್ನು ಮನೆಗೆ ಕಳುಹಿಸಲಾಗುವುದು. ನಂತರ ಪೂರ್ಣ ಪ್ರಮಾಣದಲ್ಲಿ ಅಂಗನವಾಡಿಗಳನ್ನು ಆರಂಭಿಸಿ ಆಯಾ ಕೇಂದ್ರಗಳಲ್ಲೇ ಬಿಸಿಯೂಟ, ಹಾಲು, ಮೊಟ್ಟೆ ಸೇರಿದಂತೆ ಪೌಷ್ಠಿಕ ಆಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳಿದೆ.


     

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss