ಮಂಗಳೂರು: ಸಾಮಾನ್ಯವಾಗಿ ಆಭರಣಗಳ ಜಾಹಿರಾತುಗಳಲ್ಲಿ ಮಾಡೆಲ್‌ಗಳು, ಸಿನಿಮಾ ನಟಿಯರು ಮಿಂಚುವುದು ಮಾಮೂಲು. ಆದರೆ ಕಂಬಳದ ದಾಖಲೆಯ ಓಟಗಾರ ಶ್ರೀನಿವಾಸ ಗೌಡ ಅವರು ಚಿನ್ನಾಭರಣಗಳ ಜಾಹೀರಾತಿನಲ್ಲಿ ಮಾಡೆಲ್ ಆಗಿ ಮಿಂಚಿದ್ದಾರೆ. ಪ್ರಸಿದ್ಧ ಆಭರಣ ಸಂಸ್ಥೆಯು ಕಂಬಳ ಓಟದ ಕೋಣಗಳೊಂದಿಗೆ ಓಟಗಾರನನ್ನು ತಮ್ಮ ಬ್ರ್ಯಾಂಡ್ ನ ಜಾಹೀರಾತಿನಲ್ಲಿ ಮಾಡೆಲ್ ಆಗಿ ಗುರುತಿಸಿದೆ. ಈ ಜಾಹಿರಾತಿನ ಬೃಹತ್ ಕಟೌಟ್ ಗಳು ಕರಾವಳಿಯಲ್ಲೆಡೆ ರಾರಾಜಿಸುತ್ತಿದೆ. ಕಂಪೆನಿಯ ಈ ನಡೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಗುಮೊಗದಿಂದ ಕಂಬಳದ ಓಟಕ್ಕೆ ಸಜ್ಜಾಗಿರುವ ಕೋಣಗಳೊಂದಿಗೆ ಫೋಸ್ ನೀಡಿರುವ ಶ್ರೀನಿವಾಸ ಗೌಡ ಅವರ ಕತ್ತಿನಲ್ಲಿ ವೈವಿಧ್ಯಮಯ ಚಿನ್ನದ ಹಾರಗಳನ್ನು ಧರಿಸಿದ್ದಾರೆ. ಕೈಬೆರಳುಗಳ ತುಂಬಾ ವೈವಿಧ್ಯಮಯ ಉಂಗುರಗಳು, ಕೈಗೊಂದು ಕಡತಗಳನ್ನು ಧರಿಸಿ ಪುರುಷರು ಚಿನ್ನಾಭರಣವನ್ನು ಹೇಗೆ ಬೇರೆಯವರನ್ನು ಆಕರ್ಷಿಸುವಂತೆ ಧರಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಶ್ರೀನಿವಾಸ ಗೌಡರಿಗೆ ಕಂಬಳ ಓಟದಲ್ಲಿ ಸಾಥ್ ನೀಡಿರುವ ಅತೀ ವೇಗದ ಓಟದ ಕೋಣ ಅಪ್ಪುಈ ಜಾಹಿರಾತಿನಲ್ಲಿ ಪೋಸ್ ನೀಡಿದೆ. ಈ ಹಿಂದೆ ಶ್ರೀನಿವಾಸ ಗೌಡ ಅವರು ಸೂಪರ್ ಹಿಟ್ ಸಿನಿಮಾ ಬಾಹುಬಲಿಯಲ್ಲಿ ಕೋಣ ಓಡಿಸುವ ಸಣ್ಣ ಪಾತ್ರದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಅವರು ಶೂಟಿಂಗ್ ಹಂತದಲ್ಲಿರುವ ಪಂಚಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಬಿರ್ದ್ ದ ಕಂಬಳ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.
