ಪಡವಿಗೊಡೆಯ ಉಡುಪಿ ಶ್ರೀಕೃಷ್ಣನ ಪರಮಪಾವನ ಕ್ಷೇತ್ರದಲ್ಲಿ ಸತ್ಸಂಪ್ರದಾಯದಂತೆ, ಎರಡು ವರ್ಷಗಳ ಪರ್ಯಂತ ಜರುಗಲಿರುವ ದ್ವೈವಾರ್ಷಿಕ ಪರ್ಯಾಯ ಮಹೋತ್ಸವಕ್ಕೆ ಕೃಷ್ಣಾಪುರ ಮಠ ಸಜ್ಜಾಗಿದ್ದು, ಭಕ್ತಿ ಭಾವಗಳ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದು 251 ನೇ ದ್ವೈವಾರ್ಷಿಕ ಪರ್ಯಾಯ ಮಹೋತ್ಸವವಾಗಿದ್ದು ಶ್ರೀಮಠದ ಪೀಠಾಧಿಪತಿ ವಿದ್ಯಾಸಾಗರ ತೀರ್ಥರಿಗೆ ಇದು ನಾಲ್ಕನೇ ಪರ್ಯಾಯವಾಗಿದೆ.
ಯಾವುದೇ ರೀತಿ ಆಡಂಬರಕ್ಕೆ ಹೆಚ್ಚು ಒತ್ತು ನೀಡದೆ, ಕೃಷ್ಣನ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡುವ ಶ್ರೀಗಳು ಈ ಬಾರಿಯೂ ಸರಳ, ಅರ್ಥಪೂರ್ಣ ಪರ್ಯಾಯದ ಸಂಕಲ್ಪ ಮಾಡಿದ್ದಾರೆ.
ಶ್ರೀ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳು ಪರ್ಯಾಯ ಪೀಠ ಏರುವ ಮೂಲಕ ಕೃಷ್ಣ ದೇವರ ಪೂಜೆಯ ಅಧಿಕಾರ ಪಡೆಯಲಿದ್ದಾರೆ. ಪರ್ಯಾಯ ಮಹೋತ್ಸವದ ವಿಧಿವಿದಾನ ಹಾಗೂ ಕಾರ್ಯಕ್ರಮಗಳು ದಿ. 18 ರಿಂದ ನಾಲ್ಕುದಿನಗಳ ಪರ್ಯಂತ ನಡೆಯಲಿದ್ದು, ಈ ನಾಲ್ಕು ದಿನ ಉಡುಪಿ ಕ್ಷೇತ್ರ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಜನವರಿ 18ರಂದು ಮಧ್ಯರಾತ್ರಿ ಪರ್ಯಾಯ ಮೆರವಣಿಗೆ ಸೇರಿದಂತೆ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಅಂದು ನಸುಕಿನ 2.15ಕ್ಕೆ ಕಾಪುವಿನ ದಂಡ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಲಿರುವ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು 2.30ಕ್ಕೆ ಉಡುಪಿಯ ಜೋಡುಕಟ್ಟೆ ಪ್ರವೇಶಿಸಲಿದ್ದಾರೆ.
2.45ಕ್ಕೆ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ನೆರವೇರಲಿದ್ದು, 3 ಗಂಟೆಗೆ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ. 4.15ಕ್ಕೆ ಮೆರವಣಿಗೆ ರಥಬೀದಿ ಪ್ರವೇಶಿಸಲಿದ್ದು, 4.30ಕ್ಕೆ ಕನಕನ ಕಿಂಡಿಯಲ್ಲಿ ಶ್ರೀಗಳು ದೇವರ ದರ್ಶನ ಮಾಡಿ, 4.45ಕ್ಕೆ ಚಂದ್ರಮೌಳೀಶ್ವರ, 5ಕ್ಕೆ ಅನಂತೇಶ್ವರ, ಮಧ್ವಾಚಾರ್ಯರ ದರ್ಶನ ಮಾಡಲಿದ್ದಾರೆ.
ಬೆಳಗಿನ ಜಾವ 5.25ಕ್ಕೆ ಕೃಷ್ಣಮಠ ಪ್ರವೇಶಿಸಿ ದೇವರ ದರ್ಶನ ಮಾಡಿ ಪೂಜೆ ಮಾಡಲಿದ್ದಾರೆ. 5.35ಕ್ಕೆ ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆದು, 4.45ಕ್ಕೆ ಮನ್ಮಧ್ವಾಚಾರ್ಯ ಕರಚಿತ ಅಕ್ಷಯಪಾತ್ರೆ, ಬೆಳ್ಳಿಯ ಸುಟ್ಟುಗ ಸ್ವೀಕರಿಸಲಿದ್ದಾರೆ. 5.55ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ