ಹಾಸನ: ಸ್ನೇಹಿತರ ರೂಮ್ನಲ್ಲಿ ಪಾರ್ಟಿ ಮುಗಿಸಿ ಕಾರಲ್ಲಿ ಮಲಗಿದ ಯುವಕನೊಬ್ಬ ಅಲ್ಲೇ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಅಲ್ಲದೇ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ನೇಹಿತರಿಬ್ಬರು ಮೊಬೈಲ್ಫೋನ್ ಸ್ವಿಚ್ ಆಫ್ ಮಾಡಿರುವುದು ಕುತೂಹಲ ಮೂಡಿಸಿದೆ.
ಹಾಸನ ಜಿಲ್ಲೆಯ ಬೇಲೂರಿನ ಕುವೆಂಪು ನಗರದಲ್ಲಿ ಈ ಪ್ರಕರಣ ನಡೆದಿದೆ. ಚೇತನ್ (24) ಸಾವಿಗೀಡಾದ ಯುವಕ. ಬೇಲೂರಿನ ಮೊಬೈಲ್ಫೋನ್ ಅಂಗಡಿಯೊಂದರಲ್ಲಿ ಚೇತನ್ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಮೊಬೈಲ್ಫೋನ್ ಅಂಗಡಿ ಎದುರು ಬೈಕ್ ನಿಲ್ಲಿಸಿ ಸ್ನೇಹಿತರಾದ ಗೌತಮ್, ದರ್ಶನ್, ಮಿಥುನ್ ಅವರ ಜೊತೆ ಚೇತನ್ ಪಾರ್ಟಿಗೆ ತೆರಳಿದ್ದ.
ರಾತ್ರಿ ಹನ್ನೆರಡು ಗಂಟೆಯವರೆಗೆ ಗೌತಮ್ ರೂಮ್ನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿದ ನಂತರ ದರ್ಶನ್, ಮಿಥುನ್, ಗೌತಮ್ ತೆರಳಿದರೆ ಮನೆಗೆ ತೆರಳಲಾಗದೆ ಚೇತನ್ ಕಾರಿನಲ್ಲೇ ಮಲಗಿದ್ದ. ಗೌತಮ್ ರೂಮ್ ಎದುರೇ ನಿಂತಿದ್ದ ಕಾರು, ಇಂದು ಬೆಳಗ್ಗೆ ಗಂಟೆ ಹತ್ತಾದರೂ ಕದಲದ್ದರಿಂದ ಹತ್ತಿರ ಹೋಗಿ ಗಮನಿಸಿದಾಗ ಕಾರಿನ ಹಿಂದಿನ ಸೀಟ್ನಲ್ಲಿ ಚೇತನ್ ಶವ ಕಂಡುಬಂದಿತ್ತು. ಚೇತನ್ ರಕ್ತ ವಾಂತಿ ಮಾಡಿಕೊಂಡು ಮಲಗಿದ್ದ ಸ್ಥಿತಿಯಲ್ಲಿದ್ದ. ಕೂಡಲೇ ದರ್ಶನ್-ಮಿಥುನ್‌ಗೆ ಗೌತಮ್ ಫೋನ್ ಮಾಡಿದ್ದು, ಆ ಸುದ್ದಿ ತಿಳಿದ ಬಳಿಕ ಅವರಿಬ್ಬರ ಮೊಬೈಲ್ಫೋನ್ ಸ್ವಿಚ್ ಆಫ್ ಆಗಿದೆ. ಪೊಲೀಸರಿಗೆ ಸುದ್ದಿ ಮುಟ್ಟಿದ್ದು, ಅವರು ಶವ ತೆರವುಗೊಳಿಸಿದ್ದಾರೆ. ಚೇತನ್ ಪೋಷಕರು ಕೊಲೆ ಆರೋಪ ಮಾಡಿದ್ದು, ಬೇಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.