ಕಲ್ವತರು ನಾಡು ಎಂಬ ಖ್ಯಾತಿಯ ತುಮಕೂರು, ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಸಾಂಸ್ಕೃತಿಕ,ಕಲಾ ವೈಭವದ ಈ ಜಿಲ್ಲೆಯಲ್ಲೀಗ ಸಿನಿ ಹಬ್ಬದ ಸಡಗರ ಮನೆ ಮಾಡಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಐದು ದಿನಗಳ ಕಾಲ ‘ರಾ’ ಕನ್ನಡ ಚಲನಚಿತ್ರೋತ್ಸವ ನಡೆಯಲಿದೆ.
ಸಿನಿಮಾ ಆಕರ್ಷಣೆ: ರಾಫಿಲ್ಡ್ ಫ್ಯಾಕ್ಟರಿ ಮತ್ತು ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.1ರಿಂದ 5ರವರೆಗೆ ಹುಳಿಯಾರಿನಿಂದ ಕೇವಲ ಒಂದು ಕಿಲೋಮೀಟರ್‌ನಲ್ಲಿರುವ ಕೋಡಿಪಾಳ್ಯದ ಸಾಂಸ್ಕೃತಿಕ ಸದನದಲ್ಲಿ ‘ರಾ’
ಕನ್ನಡ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಸಿನಿಪ್ರಿಯರಿಗೆ ದಿನಕ್ಕೆ 4 ಸಿನಿಮಾದಂತೆ 20 ಸಿನಿಮಾಗಳ ರಸದೌತಣ ಸವಿಯುವ ಸುವರ್ಣಾವಕಾಶವಿದೆ. ಪ್ರದರ್ಶನಗೊಳ್ಳಲಿರುವ ಸಿನಿಮಾ ನಿರ್ದೇಶಕರು, ನಟರು,
ನಿರ್ಮಾಪಕರನ್ನು ಒಳಗೊಂಡ ಚಿತ್ರತಂಡ ಕೂಡ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದೆ.
ಎಕನಾಮಿಕ್ ಟೈಮ್ಸ್ ನೀಡುವ ಬಿಝ್ನೆಸ್ ಎಕ್ಸೆಲೆನ್ಸ್ ಪ್ರಶಸ್ತಿ ಪಡೆದಿರುವ ದುಬೈ ನಿವಾಸಿ ನಿರ್ಮಾಪಕ ಡಾ.ಡೇವಿಡ್ ಫ್ರಾಂಕ್ ಫರ್ನಾಂಡಿಸ್ ನ.1ರಂದು ಬೆಳಗ್ಗೆ 11 ಗಂಟೆಗೆ ‘ರಾ’ ಚಲನಚಿತ್ರೋತ್ಸವ ಉದ್ಘಾಟಿಸುವರು.
ನಟ ರಾಜೇಶ್ ಗೌಡ, ಮಾತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್, ನಿರ್ಮಾಪಕ ಶಿವಣ್ಣ ನಂದಿಹಳ್ಳಿ ಮತ್ತಿತರರು ಇದರಲ್ಲಿ ಪಾಲ್ಗೊಳ್ಳುವರು. ಇದೇ ವೇಳೆ ‘ಮಾತಂಗಿ ಮಾಣಿಕ್ಯ’ ಆತ್ಮಕಥೆ ಪುಸ್ತಕ ಸಹ ಬಿಡುಗಡೆಯಾಗಲಿದೆ.
ಚಿತ್ರ ಸುಗ್ಗಿ: ‘ರಾ’ ಚಲನಚಿತ್ರೋತ್ಸವದಲ್ಲಿ ಮಾತಂಗಿ ದೀವಟಿಗಿ, ಶುಭಮಂಗಳ, ಅಕ್ಷರ ಬೆಳಕು, ಕಾಲಬ್ರಹ್ಮ, ಜ್ಞಾನಗಂಗೆ, ಪಂಚಮುಖಿ, ಮನೆ, ಬ್ಯಾಂಕ್ ಲೋನ್, ನೀರು ತಂದವರು, ಅನುತ್ತರ, ದೇಶಕ್ಕಾಗಿ ನಾನು ಚಿರಂಜೀವಿ,
ಬನವಾಸಿ, ದನಗಳು, ಬರಗಾಲ, ಮನೆ ನಂ.46,ಎಲ್ಲೆಲ್ಲೂ ನೀನೇ, ನನ್ನಲ್ಲೂ ನೀನೇ ಮೊದಲಾದ
ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
